ಕಾಸರಗೋಡು: ಮಂಗಳೂರಿನಿಂದ ರೈಲು ಹತ್ತಿದ ವಡಕರ ಮೂಲದ ಪ್ರಯಾಣಿಕರೊಬ್ಬರಿಗೆ ಬಿಸ್ಕೆಟ್‌ನಲ್ಲಿ ವಿಷವಿಕ್ಕಿ ಅರೆಪ್ರಜ್ಞಾವಸ್ಥೆಗೆ ತಳ್ಳಿ, ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ಗ್ಯಾಜೆಟ್‌ಗಳನ್ನು ದೋಚಿದ್ದ ಬಿಹಾರ ಮೂಲದ ಅಂತರರಾಜ್ಯ ದರೋಡೆಕೋರರ ತಂಡವನ್ನು ರೈಲ್ವೆ ಪೊಲೀಸರು (RPF & GRP) ಜಂಟಿ ಕಾರ್ಯಾಚರಣೆಯಲ್ಲಿ ಸೆರೆಹಿಡಿದಿದ್ದಾರೆ.
ಮಾರ್ಚ್ 13ರಂದು ಸಂಜೆ 6:15ಕ್ಕೆ ಮಂಗಳೂರಿನಿಂದ ಮಲಬಾರ್ ಎಕ್ಸ್‌ಪ್ರೆಸ್ ಹತ್ತಿದ್ದ ಸರಿನ್ ವಿ.ಕೆ. ಎಂಬವರು ಈ ದುರಂತಕ್ಕೆ ತುತ್ತಾದವರು.

ಘಟನೆಯ ಹಿನ್ನೆಲೆ: ಸರಿನ್ ವಿ.ಕೆ ರೈಲು ಕುಂಬ್ಳೆ ತಲುಪಿದಾಗ ಹಿಂದಿ ಮಾತನಾಡುತ್ತಿದ್ದ ಅಪರಿಚಿತ ಯುವಕನೊಬ್ಬ ಇವರೊಂದಿಗೆ ಸ್ನೇಹ ಬೆಳೆಸಿದ್ದ. ಮಾತುಕತೆಯ ನಡುವೆಯೇ ಆತ ನೀಡಿದ ಬಿಸ್ಕೆಟ್ ಸೇವಿಸಿದ ಸರಿನ್ ಅವರು ಕೆಲವೇ ನಿಮಿಷಗಳಲ್ಲಿ ಪ್ರಜ್ಞೆ ಕಳೆದುಕೊಂಡಿದ್ದಾರೆ. ರೈಲು ಅವರ ನಿಲ್ದಾಣವಾದ ವಡಕರ ದಾಟಿ ಮಲಪ್ಪುರಂನ ತಿರೂರು ತಲುಪಿದಾಗ (ರಾತ್ರಿ 11:30) ಅವರಿಗೆ ಅರೆಪ್ರಜ್ಞಾವಸ್ಥೆಯಲ್ಲಿ ಎಚ್ಚರವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ವೇಳೆ ಅವರ ಬಳಿಯಿದ್ದ ಲ್ಯಾಪ್‌ಟಾಪ್, ಮೊಬೈಲ್ ಮತ್ತು ಚಿನ್ನದ ಉಂಗುರ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ಸಿಸಿಟಿವಿ ಬಲೆಯಲ್ಲಿ ಸಿಕ್ಕಿಬಿದ್ದ ಬಿಹಾರಿಗಳು:
ಪ್ರಕರಣ ದಾಖಲಿಸಿಕೊಂಡ ಕಾಸರಗೋಡು ರೈಲ್ವೆ ಪೊಲೀಸರು ವಿವಿಧ ನಿಲ್ದಾಣಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡಿದ್ದಾರೆ. ದರೋಡೆಕೋರರು ಕೋಝಿಕೋಡ್ ರೈಲ್ವೆ ನಿಲ್ದಾಣದಲ್ಲಿ ರಾತ್ರಿ 10:30ಕ್ಕೆ ಇಳಿಯುತ್ತಿರುವ ದೃಶ್ಯ ಪೊಲೀಸರಿಗೆ ಪ್ರಮುಖ ಸುಳಿವಾಯಿತು. ಈ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಹಾರುವ ಪಡೆ, ಕೋಝಿಕೋಡ್‌ನ ಲಾಡ್ಜ್ ಒಂದರಲ್ಲಿ ತಂಗಿದ್ದ ಬಿಹಾರದ ಅರೇರಿಯಾ ಜಿಲ್ಲೆಯ ಮಹಮ್ಮದ್ ಸಫರ್ (40), ಮಹಮೂದ್ ಆಲಂ (35) ಮತ್ತು ಅಬ್ದುಲ್ಲಾ ರಜಾಕ್ (34) ಎಂಬುವವರನ್ನು ಬಂಧಿಸಿದ್ದಾರೆ. ಇವರಿಂದ ದೋಚಲಾದ ಎಲ್ಲಾ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತರ ಮೇಲೆ ಭಾರತೀಯ ನ್ಯಾಯ ಸಂಹಿತೆಯ (BNS) ಅಡಿಯಲ್ಲಿ ಕೊಲೆ ಯತ್ನ (ಸೆಕ್ಷನ್ 307), ವಿಷವುಣಿಸಿ ನೋವುಂಟು ಮಾಡುವುದು (ಸೆಕ್ಷನ್ 123) ಮತ್ತು ರೈಲಿನಲ್ಲಿ ದರೋಡೆ (ಸೆಕ್ಷನ್ 305c) ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. ಇವರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ. ರೈಲ್ವೆ ಪ್ರಯಾಣದ ಸಮಯದಲ್ಲಿ ಅಪರಿಚಿತರು ನೀಡುವ ಆಹಾರ ಅಥವಾ ಪಾನೀಯಗಳನ್ನು ಸೇವಿಸದಂತೆ ಪೊಲೀಸರು ಮತ್ತೊಮ್ಮೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
