ಯಲ್ಲೇಶ್‌ ಹತ್ಯೆ ಪ್ರಕರಣ: ತಂಗಿಯನ್ನು ನಿಂದಿಸಿದ್ದಕ್ಕೆ ಕೊಂದೆ ಎಂದ ಆರೋಪಿ!

ಕೋಲಾರ: ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ–75ರ ಕೆಂದಟ್ಟಿ ಗೇಟ್ ಬಳಿ ನಡೆದಿದ್ದ ನರಸಾಪುರದ ಯಲ್ಲೇಶ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, “ಆತನನ್ನು ಕೊಂದಿದ್ದು ಅಪ್ಪ ಅಲ್ಲ; ನಾನೇ” ಎಂದು ಆರೋಪಿ ವಿಡಿಯೊ ಪೋಸ್ಟ್‌ ಮಾಡಿದ್ದಾನೆ.

‘ನನ್ನ ಪ್ರಾಣಕ್ಕೆ ಕುತ್ತು ಬಂದಿತ್ತು. ಆತ್ಮರಕ್ಷಣೆಗೆ ಯಲ್ಲೇಶ್‌ನನ್ನು ನಾನೇ ಹೊಡೆದು ಹಾಕಿದೆ. ಕೊಲೆಗೆ ಬಳಸಿದ ಮಚ್ಚು ಸಹಿತ ನ್ಯಾಯಾಲಯಕ್ಕೆ ಶರಣಾಗುತ್ತೇವೆ’ ಎಂದು ನರಸಾಪುರದ ಸಂತೋಷ್‌ ಎಂಬಾತನ ಪುತ್ರ ಬಿಂದುಕುಮಾರ್‌ ಹೇಳಿಕೊಂಡಿದ್ದು, ಆ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

“ಯಲ್ಲೇಶ್ ನನ್ನ ತಂಗಿಯನ್ನು ನಿಂದಿಸುತ್ತಿದ್ದ. ನನ್ನ ತಂದೆಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ನನ್ನ ಮೇಲೆಯೂ ಐದು ಬಾರಿ ಹಲ್ಲೆ ಮಾಡಿದ್ದ. ವೇಮಗಲ್‌ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ಯಾವುದೇ ಕ್ರಮ ಆಗಿರಲಿಲ್ಲ. ಇದೀಗ ಮತ್ತೆ ನನ್ನನ್ನು ಕೊಲೆ ಮಾಡಲು ಸಂಚು ರೂಪಿಸುತ್ತಿದ್ದ ಮಾಹಿತಿ ದೊರೆತ ಕಾರಣ ಆತ್ಮರಕ್ಷಣೆಗಾಗಿ ನಾನು, ನನ್ನ ಸ್ನೇಹಿತ ಮತ್ತು ಆತನ ಅಣ್ಣ ಸೇರಿ ಕೊಲೆ ಮಾಡಿದ್ದೇವೆ” ಎಂದು ಹೇಳಿರುವುದು ವಿಡಿಯೊದಲ್ಲಿದೆ.

ಯಲ್ಲೇಶ್ ತಲೆಗೆ ಕಲ್ಲು ಎಸೆದು ಕೊಲೆ ಮಾಡಿದ್ದೇವೆ ಎಂಬುದು ಸುಳ್ಳು. ಮಚ್ಚಿನಿಂದ ಕೊಲೆ ಮಾಡಿದ್ದೇವೆ ಎಂದಿದ್ದಾನೆ. ಈ ಕೊಲೆ ಪ್ರಕರಣಕ್ಕೂ ನನ್ನ ತಂದೆಗೂ ಯಾವುದೇ ಸಂಬಂಧ ಇಲ್ಲ. ಅವರು ಮನೆ ಬಿಟ್ಟು ಹೋಗಿ ಎಂಟು ವರ್ಷ‌ಗಳಾಗಿದೆ. ವಾರಕ್ಕೊಮ್ಮೆ ಮಾತ್ರ ಮನೆಗೆ ಬಂದು ಹೋಗುತ್ತಿದ್ದರು. ಅವರು ಮನೆಗೆ ಬಂದಾಗಲೆಲ್ಲ ಕಳ್ಳ ಎಂದು ಯಲ್ಲೇಶ್‌, ಪೊಲೀಸರಿಗೆ ಹೇಳಿಕೊಡುತ್ತಿದ್ದ. ಆರು ವರ್ಷಗಳ ಹಿಂದೆಯೇ ಅಪ್ಪ ಕಳ್ಳತನ ಬಿಟ್ಟಿದ್ದರು. ಆದರೆ ಆತನಿಂದಾಗಿ ನಮ್ಮ ಕುಟುಂಬ ನಿರಂತರ ಕಿರುಕುಳ ಅನುಭವಿಸಬೇಕಾಯಿತು ಎಂದು ಹೇಳಿದ್ದಾನೆ.

ಕೊಲೆಯಾದ ಯಲ್ಲೇಶ್‌ ತನ್ನ ಪತ್ನಿಯನ್ನು ಬಿಟ್ಟು ನರಸಾಪುರ ಗ್ರಾಮದ ಸಂತೋಷ್ ಎಂಬುವರ ಹೆಂಡತಿಯನ್ನು ಕೆರೆದುಕೊಂಡು ಬಂದು ಮನೆಯಲ್ಲಿ ಇರಿಸಿಕೊಂಡು ಆರೇಳು ವರ್ಷಗಳಿಂದ ‌ಸಂಸಾರ ನಡೆಸುತ್ತಿದ್ದ. ಮೊದಲಿನ ಪತ್ನಿ ಯಲ್ಲೇಶ್ ನನ್ನು ಬಿಟ್ಟು ತವರು ಮನೆ ಸೇರಿಕೊಂಡಿದ್ದರು. ಈ ಮಧ್ಯೆ, ಯಲ್ಲೇಶ್‌ ಮೇಲೆ ಸಂತೋಷ್‌ ಹಗೆ ಸಾಗಿಸುತ್ತಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಸಂತೋಷ್‌ ಕೂಡ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು “ಕೊಲೆ ಮಾಡಿದ್ದು ನಾನಲ್ಲ. ಆಗ ನಾನು ಊರಿನಲ್ಲೇ ಇರಲಿಲ್ಲ.‌ ಮಾಡಿದ ಕರ್ಮಕ್ಕೆ ಯಲ್ಲೇಶ್‌ ಬಲಿಯಾಗಿದ್ದಾನೆ. ನನ್ನ ಪತ್ನಿಯೊಂದಿಗೆ ಬದುಕಲು ಆತ ಬಿಡಲಿಲ್ಲ” ಎಂದಿದ್ದಾರೆ.

ಈಗಾಗಲೇ ಪ್ರಕರಣ ದಾಖಲಿಸಿಕೊಂಡಿರುವ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಕೊಲೆ ಮಾಡಿರುವುದಾಗಿ ಆರೋಪಿ ಪೋಸ್ಟ್‌ ಮಾಡಿರುವ ವಿಡಿಯೊವನ್ನು ಆಧಾರವಾಗಿಟ್ಟುಕೊಂಡು ತನಿಖೆ ಆರಂಭಿಸಿದ್ದಾರೆ.

error: Content is protected !!