ಬೆಂಗಳೂರು: ಪೊಲೀಸ್ ಮಹಾನಿರ್ದೇಶಕರು ಮತ್ತು ಇನ್ಸ್‌ಪೆಕ್ಟರ್ ಜನರಲ್ (ಡಿಜಿ ಮತ್ತು ಐಜಿಪಿ) ಎಂ.ಎ. ಸಲೀಂ ವಿರುದ್ಧ ಸುಳ್ಳು ಮಾಹಿತಿ ಹರಡಿದ ಆರೋಪದ ಮೇಲೆ ಗೋರಕ್ಷಕ ಮತ್ತು ಹಿಂದುತ್ವ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಮತ್ತು ಅವರ ಸಹಚರರ ವಿರುದ್ಧ ಸೈಬರ್ ಅಪರಾಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಳೆದ 10 ದಿನಗಳಲ್ಲಿ ಪುನೀತ್ ಕೆರೆಹಳ್ಳಿ ವಿರುದ್ಧ ದಾಖಲಾಗಿರುವ ಮೂರನೇ ಎಫ್‌ಐಆರ್ ಇದಾಗಿದೆ.

ಜನವರಿ 23 ರಂದು ಎಫ್‌ಐಆರ್ ದಾಖಲಾಗಿದ್ದು, ಎಫ್ಐಆರ್ ನಲ್ಲಿ ಪುನೀತ್ ಕೆರೆಹಳ್ಳಿ ಅವರು ನಾಲ್ಕರಿಂದ ಐದು ಸಹಚರರೊಂದಿಗೆ ಜನವರಿ 22 ರಂದು ಸಕಿನಾ ತಸ್ಲೀಂ ಅವರಿಗೆ ಸೇರಿದ ಸೋಲದೇವನಹಳ್ಳಿ ಬಳಿಯ ಕೆಂಪಾಪುರ ಶ್ವೇತಾ ಫಾರ್ಮ್ ರಸ್ತೆಯಲ್ಲಿರುವ ಪ್ರದೇಶವೊಂದಕ್ಕೆ ಹೋಗಿದ್ದು, ಅಲ್ಲಿ ಲೈವ್ ವೀಡಿಯೋ ಮಾಡಿದ್ದಾರೆ.

ವಿಡಿಯೋದಲ್ಲಿ ಅಲ್ಲಿದ್ದ ಜನರನ್ನು ಬಾಂಗ್ಲಾದೇಶದಿಂದ ಮಾನವ ಕಳ್ಳಸಾಗಣೆ ಮೂಲಕ ಇಲ್ಲಿಗೆ ಕರೆತಂದು ಆಶ್ರಯ ನೀಡಲಾಗುತ್ತಿದೆ. ಇದು ಡಿಜಿ ಮತ್ತು ಐಜಿಪಿ ಸಲೀಂ ಅವರಿಗೆ ಸೇರಿದ ʻಬೇನಾಮಿ’ ಆಸ್ತಿಯಾಗಿದೆ. ಬಾಂಗ್ಲಾದೇಶಿ ಮುಸ್ಲಿಮರು ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದಾರೆಂದು ಆರೋಪಿಸಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 196 (ಧರ್ಮ, ಜನಾಂಗ, ಜನ್ಮಸ್ಥಳ, ನಿವಾಸ ಅಥವಾ ಭಾಷೆಯ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 353 (ಸಾರ್ವಜನಿಕ ದುಷ್ಕೃತ್ಯಕ್ಕೆ ಕಾರಣವಾಗುವ ಹೇಳಿಕೆಗಳು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.