ಮಂಗಳೂರು: ಮಂಗಳೂರು ಹೊರವಲಯದ ಗುರುಪುರ ಕೈಕಂಬ ಪೇಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಉಂಟಾಗಿದ್ದ ದೊಡ್ಡ ಆತಂಕವೊಂದು ಈಗ ನಿವಾರಣೆಯಾಗಿದೆ. ಕೈಕಂಬ ಪೇಟೆಯನ್ನು ಇಬ್ಭಾಗ ಮಾಡಿ, ಮಳಲಿ ಮಟ್ಟಿ ಮತ್ತು ಕಂದಾವರ ಗ್ರಾಮಗಳ ಸಂಪರ್ಕವನ್ನೇ ಕಡಿತಗೊಳಿಸುತ್ತಿದ್ದ ಮಣ್ಣಿನ ಭರ್ತಿಯ ಮೇಲ್ಸೇತುವೆ ಕಾಮಗಾರಿ ಸ್ಥಗಿತಗೊಳ್ಳಲಿದ್ದು, ಅಲ್ಲಿ ಸಾರ್ವಜನಿಕರ ಆಶಯದಂತೆ ʻಅಂಡರ್ ಪಾಸ್’ ನಿರ್ಮಾಣವಾಗಲಿದೆ ಎಂಬ ಮಾಹಿತಿ ಲಭಿಸಿದೆ.

ಹೋರಾಟಕ್ಕೆ ಮಣಿದ ಹೆದ್ದಾರಿ ಇಲಾಖೆ:
ಕೈಕಂಬ ಪೇಟೆಯಲ್ಲಿ ಸ್ಲೈಡಿಂಗ್ ಬೀಮ್ ಅಳವಡಿಸಿ ಅದರ ಒಳಗೆ ಮಣ್ಣು ಹಾಕಿ ಮೇಲ್ಸೇತುವೆ ರಸ್ತೆ ನಿರ್ಮಿಸಲಾಗುತ್ತಿತ್ತು. ಇದರಿಂದ ವಾಹನ ಸವಾರರು ಯೂ-ಟರ್ನ್ ಹೊಡೆಯಲು ಸಾಧ್ಯವಾಗದೆ ಸುತ್ತಿ ಬಳಸಿ ಸಂಚರಿಸಬೇಕಾದ ಅನಿವಾರ್ಯತೆ ಇತ್ತು. ಅಲ್ಲದೆ ಕಂದಾವರ ಹಾಗೂ ಮಳಲಿ ಮಟ್ಟಿ ಗ್ರಾಮಗಳಿಗೆ ವಾಹನ ಚಲಾಯಿಸಲು ಸಾಧ್ಯವಾಗುತ್ತಿರಲಿಲ್ಲ. ವಾಹನ ಸವಾರರು ಸುತ್ತಿ ಬಳಸಿ ಸಂಚರಿಸದೆ ವಿರುದ್ಧ ದಿಕ್ಕಿನಲ್ಲಿ ಸಂಚರಿಸುವ ಅನಿವಾರ್ಯತೆಯಲ್ಲಿ ಸಿಲುಕಿದ್ದು, ಇದರಿಂದ ಅಪಘಾತವಾಗುವ ಸಂಭವವೂ ಹೆಚ್ಚಿತ್ತು. ಇದನ್ನು ವಿರೋಧಿಸಿ ಸ್ಥಳೀಯ ನಾಗರಿಕರು ಹಾಗೂ ಬಿಜೆಪಿ ಗಂಜಿಮಠ ಮಹಾಶಕ್ತಿ ಕೇಂದ್ರದ ಪದಾಧಿಕಾರಿಗಳು ನಿರಂತರ ಪ್ರತಿಭಟನೆ ನಡೆಸಿದ್ದರು.

ಸಂಸದರು ಮತ್ತು ಶಾಸಕರ ಸಮಯೋಚಿತ ಹಸ್ತಕ್ಷೇಪ:
ನಾಗರಿಕರ ಮನವಿಗೆ ತಕ್ಷಣ ಸ್ಪಂದಿಸಿದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಶಾಸಕರಾದ ಡಾ. ಭರತ್ ಶೆಟ್ಟಿ ವೈ. ಅವರು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ತುರ್ತು ಮಾತುಕತೆ ನಡೆಸಿದರು. ಪೇಟೆಯ ವ್ಯಾಪಾರಿಗಳಿಗೆ ಮತ್ತು ಗ್ರಾಮಸ್ಥರಿಗೆ ಆಗುವ ತೊಂದರೆಯನ್ನು ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ, ಅಧಿಕಾರಿಗಳು ಸ್ಲೈಡಿಂಗ್ ಬೀಮ್ ಕಾಮಗಾರಿಯನ್ನು ನಿಲ್ಲಿಸಿ ಅಂಡರ್ ಪಾಸ್ ನಿರ್ಮಿಸಲು ಒಪ್ಪಿಗೆ ಸೂಚಿಸಿದ್ದಾರೆ.

ನಾಗರಿಕರಿಂದ ಧನ್ಯವಾದ ಸಮರ್ಪಣೆ:
ತಮ್ಮ ಬೇಡಿಕೆಯನ್ನು ಈಡೇರಿಸಿದ ಸಂಸದರು ಮತ್ತು ಶಾಸಕರಿಗೆ ಬಿಜೆಪಿ ಗಂಜಿಮಠ ಮಹಾಶಕ್ತಿ ಕೇಂದ್ರ ಹಾಗೂ ಗುರುಪುರ ಕೈಕಂಬ, ಮಟ್ಟಿ ಮತ್ತು ಕಂದಾವರದ ನಾಗರಿಕರು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಈ ಅಂಡರ್ ಪಾಸ್ ನಿರ್ಮಾಣದಿಂದ ಪೇಟೆಯ ವ್ಯಾಪಾರ ವಹಿವಾಟು ಸುಗಮವಾಗಲಿದ್ದು, ವಾಹನ ಸವಾರರಿಗೆ ಸಂಚಾರದ ಕಿರಿಕಿರಿ ತಪ್ಪಲಿದೆ.
