ಮಂಗಳೂರು: “ಕಿಡ್ನಿ ಕಾಯಿಲೆ ಎಂಬುದು ಆರಂಭದಲ್ಲಿ ಯಾವುದೇ ರೋಗ ಲಕ್ಷಣಗಳನ್ನು ತೋರಿಸದ ಒಂದು ನಿಗೂಢ ಶತ್ರು. ಹೀಗಾಗಿ ಆರಂಭಿಕ ತಪಾಸಣೆಯೊಂದೇ ಕಿಡ್ನಿ ವೈಫಲ್ಯ ತಡೆಗಟ್ಟಲು ಇರುವ ಏಕೈಕ ದಾರಿ” ಎಂದು ಮಂಗಳೂರು KMC ಆಸ್ಪತ್ರೆಯ ಹಿರಿಯ ನೆಫ್ರೋಲಜಿ ತಜ್ಞ ಡಾ. ಅಶೋಕ್ ಭಟ್ ಹೇಳಿದ್ದಾರೆ.

ವಿಶ್ವ ಕಿಡ್ನಿ ದಿನದ ಅಂಗವಾಗಿ ಗುರುವಾರ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿಡ್ನಿ ಆರೋಗ್ಯದ ಬಗ್ಗೆ ಹತ್ತಾರು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡರು.
ಅಧಿಕ ರಕ್ತದೊತ್ತಡ, ಮಧುಮೇಹ (Diabetes) ಮತ್ತು ವಂಶಪಾರಂಪರ್ಯವಾಗಿ ಕಿಡ್ನಿ ಸಮಸ್ಯೆ ಇರುವವರು ಕಡ್ಡಾಯವಾಗಿ ನಿಯಮಿತ ತಪಾಸಣೆ ಮಾಡಿಸಿಕೊಳ್ಳಬೇಕು. ಹೈಡ್ರೇಟ್ ಆಗಿರುವುದು (ಧಾರಾಳ ನೀರು ಕುಡಿಯುವುದು), ಆರೋಗ್ಯಕರ ಜೀವನಶೈಲಿ ಮತ್ತು ರಕ್ತದೊತ್ತಡದ ನಿಯಂತ್ರಣದಿಂದ ಕಿಡ್ನಿ ರೋಗದ ಅಪಾಯ ತಗ್ಗಿಸಬಹುದು ಎಂದು ನುಡಿದರು. ದಾನಿಗಳು ಅಂಗಾಂಗ ದಾನಕ್ಕೆ ನೋಂದಣಿ ಮಾಡಿದ ನಂತರ ಆ ವಿಷಯವನ್ನು ತಮ್ಮ ಕುಟುಂಬದವರಿಗೆ ತಿಳಿಸುವುದು ಬಹಳ ಮುಖ್ಯ ಎಂದು ಡಾ. ಅಶೋಕ್ ಭಟ್ ಒತ್ತಿ ಹೇಳಿದರು.

ಮತ್ತೊಬ್ಬ ಹಿರಿಯ ತಜ್ಞ ಡಾ. ಸುಶಾಂತ್ ಕುಮಾರ್ ಮಾತನಾಡಿ, “ಡಯಾಲಿಸಿಸ್‌ಗೆ ಹೋಲಿಸಿದರೆ ಕಿಡ್ನಿ ಕಸಿ (Kidney Transplant) ಅತ್ಯಂತ ಯಶಸ್ವಿ ಮತ್ತು ಉತ್ತಮ ವಿಧಾನ. ಸರ್ಕಾರದ ʻಜೀವ ಸಾರ್ಥಕತೆ’ ಯೋಜನೆ ಮೂಲಕ ಮರಣ ಹೊಂದಿದವರಿಂದ ಅಥವಾ ಕಾನೂನುಬದ್ಧವಾಗಿ ಜೀವಂತ ದಾನಿಗಳಿಂದ ಕಿಡ್ನಿ ಪಡೆಯಲು ಅವಕಾಶವಿದೆ” ಎಂದರು.
ಕೆಎಂಸಿ ಆಸ್ಪತ್ರೆಯ ನೆಫ್ರೋಲಜಿ ವಿಭಾಗದ ಮುಖ್ಯಸ್ಥ ಡಾ. ಮಯೂರ್ ಪ್ರಭು ಅವರು ಆಸ್ಪತ್ರೆಯಲ್ಲಿ ಲಭ್ಯವಿರುವ ಅತ್ಯಾಧುನಿಕ ಡಯಾಲಿಸಿಸ್ ಮತ್ತು ಕಿಡ್ನಿ ಕಸಿ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಡಾ. ದುಷ್ಯಂತ್ ಮತ್ತು ಪಿಆರ್‌ಒ ರಾಕೇಶ್ ಉಪಸ್ಥಿತರಿದ್ದರು.