ಕರಾವಳಿ ಕರ್ನಾಟಕವನ್ನು ಸಿಲಿಕಾನ್ ಹಬ್ ಆಗಿಸುವ ಕನಸು : ರೋಹಿತ್ ಭಟ್

ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಜ್ಯ ಮಟ್ಟದ ‘ಆಕೃತಿ’ ತಾಂತ್ರಿಕ, ಸಾಂಸ್ಕೃತಿಕ ಉತ್ಸವ 2026 ಉದ್ಘಾಟನೆ

ಮಂಗಳೂರು: ಬೆಂಜನಪದವಿನ ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೂರು ದಿನಗಳ ರಾಜ್ಯಮಟ್ಟದ ‘ಆಕೃತಿ’ ತಾಂತ್ರಿಕ ಹಾಗೂ ಸಾಂಸ್ಕೃತಿಕ ಉತ್ಸವ 2026 ಗುರುವಾರ ದೀಪಪ್ರಜ್ವಲನೆ ಮೂಲಕ ಆರಂಭಗೊಂಡಿತು. ಕಾಲೇಜಿನ ವಾರ್ಷಿಕೋತ್ಸವದ ಅಂಗವಾಗಿ ಡಾ. ಪಿ. ದಯಾನಂದ ಪೈ – ಪಿ. ಸತೀಶ್ ಪೈ ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಡುಪಿಯ 99 ಗೇಮ್ಸ್ ಹಾಗೂ ರೋಬೋಸಾಫ್ಟ್ ಸಂಸ್ಥೆಗಳ ಸ್ಥಾಪಕ ಮತ್ತು ಟೈ ಮಂಗಳೂರು ಅಧ್ಯಕ್ಷ ರೋಹಿತ್ ಭಟ್ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಕರಾವಳಿ ಕರ್ನಾಟಕದಲ್ಲಿ ಪ್ರತಿ ವರ್ಷ 25ಕ್ಕೂ ಅಧಿಕ ತಾಂತ್ರಿಕ ಕಾಲೇಜುಗಳಿಂದ ಸುಮಾರು 15 ಸಾವಿರಕ್ಕೂ ಹೆಚ್ಚು ಇಂಜಿನಿಯರ್‌ಗಳು ಹಾಗೂ 150ಕ್ಕೂ ಹೆಚ್ಚು ಪದವಿ ಕಾಲೇಜುಗಳಿಂದ 40 ಸಾವಿರಕ್ಕೂ ಅಧಿಕ ಪದವೀಧರರು ಹೊರಬರುತ್ತಿದ್ದಾರೆ. ಆದರೆ ಇವರಲ್ಲಿ ಶೇಕಡಾ 95ಕ್ಕೂ ಹೆಚ್ಚು ಪ್ರತಿಭೆಗಳು ವಿದೇಶಗಳಲ್ಲಿ ಅವಕಾಶಗಳನ್ನು ಪಡೆದುಕೊಳ್ಳುತ್ತಿರುವುದು ಗಮನಾರ್ಹ ವಿಷಯವಾಗಿದೆ ಎಂದು ಅವರು ಹೇಳಿದರು. ಈ ಪ್ರತಿಭೆಗಳ ರಫ್ತಿಗೆ ಬದಲಾಗಿ ಕರಾವಳಿ ಭಾಗವನ್ನು ಸಿಲಿಕಾನ್ ಹಬ್ ಆಗಿ ರೂಪಿಸುವ ಕನಸನ್ನು ಸಾಕಾರಗೊಳಿಸುವತ್ತ ಟೈ ಮಂಗಳೂರು ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಈ ಭಾಗದಲ್ಲಿ ಸ್ಟಾರ್ಟ್‌ಅಪ್ ಸಂಸ್ಕೃತಿ, ಉದ್ಯಮಶೀಲತೆ ಮತ್ತು ಹೊಸ ಉದ್ಯಮಗಳನ್ನು ಬೆಳೆಸುವ ವಾತಾವರಣ ನಿರ್ಮಾಣವಾಗಬೇಕು. ಎಐ ಉದ್ಯೋಗಾವಕಾಶಗಳನ್ನು ಕಸಿದುಕೊಳ್ಳುತ್ತದೆ ಎಂಬ ಆತಂಕಗಳಿದ್ದರೂ, ಅದೇ ಸಮಯದಲ್ಲಿ ಹೊಸ ಅವಕಾಶಗಳನ್ನು ಕೂಡ ತೆರೆದಿಟ್ಟಿದೆ. ಯುವಕರು ಈ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ತಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಕಾಲೇಜಿನ ಹೊಸ ವೆಬ್‌ಸೈಟ್‌ನ್ನು ಕೂಡ ಲೋಕಾರ್ಪಣೆಗೊಳಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಆಡಳಿತ ಮಂಡಳಿಯ ಅಧ್ಯಕ್ಷ ಡಿ. ವಾಸುದೇವ ಕಾಮತ್ ಮಾತನಾಡಿ, ಕೆನರಾ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಲ್ಲಿ ಕೌಶಲ್ಯ, ಮೌಲ್ಯ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವುದರ ಜೊತೆಗೆ ಜೀವನದ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ನೀಡುವ ಶಿಕ್ಷಣವನ್ನು ಒದಗಿಸುತ್ತಿವೆ ಎಂದು ಹೇಳಿದರು.

ಕಾಲೇಜಿನ ಸಂಚಾಲಕ ಹಾಗೂ ಆಡಳಿತ ಮಂಡಳಿಯ ಕಾರ್ಯದರ್ಶಿ ಎಂ. ರಂಗನಾಥ ಭಟ್ ಮಾತನಾಡಿ, ದೂರದೃಷ್ಟಿ ಇದ್ದಾಗ ಮಾತ್ರ ಯಶಸ್ಸು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಕೇವಲ ಉದ್ಯೋಗ ಪಡೆಯುವ ಕನಸು ಮಾತ್ರ ಹೊಂದದೆ, ಉದ್ಯೋಗ ನೀಡುವ ಉದ್ಯಮಿಗಳಾಗುವ ಗುರಿಯನ್ನು ಹೊಂದಬೇಕು ಎಂದು ಹಾರೈಸಿದರು.

ಪ್ರಾಂಶುಪಾಲ ಡಾ. ನಾಗೇಶ್ ಹೆಚ್.ಆರ್ ವಾರ್ಷಿಕ ವರದಿ ವಾಚಿಸಿದರು. ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ಕ್ಯಾರೊಲ್ ಡಿ ಮೆಲ್ಲೋ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ಹಾಗೂ ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿನಿ ನಿಸರ್ಗ ಸಾಧಕರ ವಿವರ ನೀಡಿದರು.

ಕಾಲೇಜಿನ ರಜತ ಮಹೋತ್ಸವದ ಅಂಗವಾಗಿ ಮೊದಲ ಬ್ಯಾಚಿನ ಹಳೆಯ ವಿದ್ಯಾರ್ಥಿ ಹಾಗೂ ಕ್ಯಾಪಿಲ್ಲರಿ ಸಂಸ್ಥೆಯ ಕಸ್ಟಮರ್ ಸಕ್ಸೆಸ್ ವಿಭಾಗದ ಹಿರಿಯ ನಿರ್ದೇಶಕ ಬಸ್ತಿ ಸುಹಾಸ್ ಶೆಣೈ ಅವರಿಗೆ ‘ಕೆನರಾ ಕೀರ್ತಿ’ ಗೌರವ ನೀಡಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಅಗತ್ಯವಿಲ್ಲದ ವಿಷಯಗಳನ್ನು ಮರೆಯುವ ಗುಣವನ್ನು ಬೆಳೆಸಿಕೊಳ್ಳಬೇಕು. ಬದುಕಿನ ಅಡೆತಡೆಗಳಿಗೆ ಸಿಲುಕದೆ ಮುಂದೆ ಬೆಳೆಯುತ್ತಾ ತಮ್ಮದೇ ಗುರುತು ಮೂಡಿಸುವುದು ಪ್ರತಿಯೊಬ್ಬರ ಗುರಿಯಾಗಬೇಕು ಎಂದು ಹೇಳಿದರು. ನೇಮಕಾತಿ ಹಾಗೂ ತರಬೇತಿ ವಿಭಾಗದ ಮತ್ತು ಹಳೆಯ ವಿದ್ಯಾರ್ಥಿ ಸಂಪರ್ಕ ವಿಭಾಗದ ಮುಖ್ಯಸ್ಥೆ ದೀಪ್ತಿ ದಿನೇಶ್ ಪ್ರಭು ಸನ್ಮಾನಿತರನ್ನು ಪರಿಚಯಿಸಿದರು.

ವಿದ್ಯಾರ್ಥಿ ಕೌನ್ಸಿಲ್ ಉಪಾಧ್ಯಕ್ಷೆ ಕೆ. ತೇಜಸ್ವಿ ನಾಯಕ್ ವಂದಿಸಿದರು. ವಿದ್ಯಾರ್ಥಿಗಳಾದ ಮಣೇಲ್ ಓಂ ನಾಯಕ್ ಮತ್ತು ಆನೋರಾ ಆಂಡ್ರಿಯಾ ಡಿ ಸೋಜಾ ಕಾರ್ಯಕ್ರಮ ನಿರೂಪಿಸಿದರು. ಆಡಳಿತ ಮಂಡಳಿಯ ಉಪಾಧ್ಯಕ್ಷ ಕೆ. ಸುರೇಶ್ ಕಾಮತ್, ಜತೆ ಕಾರ್ಯದರ್ಶಿ ಟಿ. ಗೋಪಾಲಕೃಷ್ಣ ಶೆಣೈ, ಆಡಳಿತ ಮಂಡಳಿ ಸದಸ್ಯರಾದ ಬಸ್ತಿ ಪುರುಷೋತ್ತಮ ಶೆಣೈ, ಅಶ್ವಿನಿ ಕಾಮತ್, ಯೋಗೇಶ್ ಕಾಮತ್, ಡಿ. ವಿಕ್ರಮ್ ಪೈ, ವಿನಾಯಕ್ ಕಾಮತ್ ಸೇರಿದಂತೆ ಆಕೃತಿ ಉತ್ಸವದ ಪ್ರಧಾನ ಸಮನ್ವಯಕಾರ ನವೀನ್ ಎ. ಕಲಾಲ್, ವಿದ್ಯಾರ್ಥಿ ಕೌನ್ಸಿಲ್ ಅಧ್ಯಕ್ಷ ಕೆ. ಆದಿತ್ಯ ಭಕ್ತ ಹಾಗೂ ಆಕೃತಿಯ ವಿದ್ಯಾರ್ಥಿ ಸಮನ್ವಯಕಾರರಾದ ಸಂಜಯ್ ಕಾಮತ್, ಕೌಶಿಕ್ ಎಸ್. ಬಾಳಿಗಾ, ಪ್ರಣವ್ ಭಟ್, ಪ್ರಥಮೇಶ್ ನಾಯಕ್, ವರ್ಷಾ ನಾಯಕ್ ಮತ್ತು ಪ್ರಜ್ಞಾ ನಾಯಕ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!