400 ಕೋಟಿ ದರೋಡೆ ಹಿಂದಿನ ಅಸಲಿಯತ್‌ ಏನು?: ಬ್ಲ್ಯಾಕ್ ಟು ವೈಟ್ ಮಿಸ್ಟರಿ ಹಿಂದೆ ಗುಜರಾತ್‌ ಪ್ರಭಾವಿ ರಾಜಕಾರಣಿ?

ಬೆಳಗಾವಿ: ಬೆಳಗಾವಿ–ಗೋವಾ ಗಡಿಯ ಚೋರ್ಲಾ ಘಾಟ್, ಕಾಡಿನ ಕತ್ತಲೆಯಲ್ಲಿ ಮರೆಯಾದ ಈ ಸ್ಥಳದಲ್ಲಿ, ಕಪ್ಪು ಹಣದ ಕಾಳದಂಧೆ ನಡೆಯುತ್ತಿದೆ ಎನ್ನುವುದಕ್ಕೆ 400 ಕೋಟಿ ರೂಪಾಯಿಯ ನಗದು ದರೋಡೆ ಪ್ರಕರಣ ಸಾಕ್ಷಿಯಾಗಿದೆ. ಮಹಾರಾಷ್ಟ್ರದ ಎಸ್‌ಐಟಿ ತನಿಖೆಯ ಜಾಡು ಹಿಡಿದಾಗ ಗೊತ್ತಾಗಿದ್ದು, ಇಲ್ಲಿ ರಾಜಕೀಯ ಶ್ರೇಣಿಯ ನಂಟು, ಬೃಹತ್ ಮನಿ ಲಾಂಡರಿಂಗ್ ಜಾಲ, ನಿಷೇಧಿತ 2000 ರೂಪಾಯಿ ನೋಟುಗಳ ಅಸಹ್ಯ ವ್ಯವಹಾರ ಇದೆ ಎನ್ನುವ ಸತ್ಯ. ಇದು ಕೇವಲ ದರೋಡೆ ಮಾತ್ರವಲ್ಲ, ದೇಶದ ಹಣಕಾಸಿನ ಭದ್ರತೆಗೆ ಎಚ್ಚರಿಕೆಯ ಘಂಟೆಯಾಗಿದೆ.

AI Photo

ಗುಜರಾತ್ ರಾಜಕಾರಣಿಯ ಹಣ?
ಈ 400 ಕೋಟಿ ನಗದು ಗುಜರಾತ್ ನ ಪ್ರಭಾವಿ ರಾಜಕಾರಣಿ ಯೋರ್ವರಿಗೆ ಸೇರಿದ ಶಂಕೆ ತೀವ್ರವಾಗಿದೆ. ನಿಷೇಧಿತ ನೋಟುಗಳು ಗೋವಾ ಮಾರ್ಗದಲ್ಲಿ ಸಾಗಿಸುತ್ತಿದ್ದುದನ್ನು ಗಮನಿಸಿದ ಮೇಲೆ, ಮಹಾರಾಷ್ಟ್ರದ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ್ ಶೇಟ್ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದನೆಂದು ತನಿಖೆ ದೃಢಪಡಿಸಿದೆ.

ದರೋಡೆಗೀಡಾದ ಹಣವನ್ನು ಬೆಳಗಾವಿಯಿಂದ ತೆಲಂಗಾಣದ ಬಾಲಾಜಿ ಟ್ರಸ್ಟ್‌ಗೆ ಸಾಗಿಸಿ, ಹಂತ ಹಂತವಾಗಿ ಕಪ್ಪು ಹಣವನ್ನು ವೈಟ್ ಮನಿಯಾಗಿ ಪರಿವರ್ತಿಸುವ ಯೋಜನೆಯೊಂದು ರೂಪಿತವಾಗಿತ್ತಂತೆ. ಕಿಶೋರ್ ಶೇಟ್ ಮತ್ತು ಅವರ ತಂಡ, ಬೇನಾಮಿ ಆಸ್ತಿಗಳನ್ನು ನಿರ್ಮಿಸಲು ಈ ಯೋಜನೆಯನ್ನು ರೂಪಿಸಿದ್ದಂತೆ. ಹಣ ಸಾಗಾಟದ ಜವಾಬ್ದಾರಿಯನ್ನು ವಿರಾಟ್ ಎಂಬ ಆರೋಪಿ ಹತ್ತಿಕೊಂಡಿದ್ದನು. ಹಣ ತುಂಬಿದ ಕಂಟೇನರ್ ಚೋರ್ಲಾ ಘಾಟ್ ಮೂಲಕ ಸಾಗುವಾಗ, ವಿರಾಟ್ ತಂಡದ ಹುಡುಗರು ನಗದು ಸಮೇತ ನಾಪತ್ತೆಯಾಗಿದ್ದಾರೆ.

ವೈರಲ್ ಆಯ್ತು ವಾಟ್ಸಪ್ ಸಂಭಾಷಣೆ
ವಿರಾಟ್ ಗಾಂಧಿ ಮತ್ತು ಜಯೇಶ್ ಕದಂ ನಡುವಿನ ವಾಟ್ಸಪ್ ಸಂಭಾಷಣೆಗಳು ಪರಿಶೀಲನೆಗೆ ಲಭ್ಯವಾಗಿವೆ. ಹಣದ ವ್ಯವಹಾರ ಮತ್ತು ಟ್ರಸ್ಟ್ ನಂಟುಗಳ ಕುರಿತು ಸ್ಪಷ್ಟ ಉಲ್ಲೇಖವಿದೆ:
ವಿರಾಟ್: “ಕಿಶೋರ್ ಭಾಯಿಗೆ ಎಲ್ಲಾ ಪುರಾವೆ ಕೊಟ್ಟಿದ್ದೇನೆ. ಆಶ್ರಮದ ಜೊತೆ ಮೀಟಿಂಗ್ ಮಾಡುತ್ತಿದ್ದೇನೆ. ಡೀಲ್ 170 ಕೋಟಿ, ನಮಗೆ 10% ಸಿಗುತ್ತೆ.”
ಜಯೇಶ್: “ಈ ತಿಂಗಳ ಕೊನೆಯೊಳಗೆ ಪೇಮೆಂಟ್ ಸಿಗುತ್ತಾ?”
ವಿರಾಟ್: “ಜನವರಿ 5 ಅಥವಾ 10 ರೊಳಗೆ ಆಗಬಹುದು. ಟೆನ್ಷನ್ ಮಾಡಬೇಡ, ಮಾಲ್ ರಿಟರ್ನ್ ಕೇಳುತ್ತಿದ್ದಾರೆ ಆದರೆ ಪೇಮೆಂಟ್ ರಿಟರ್ನ್ ಆಗಲ್ಲ. ಕಂಪನಿ (ಆಶ್ರಮ) ಅಡ್ರೆಸ್ ಕಳುಹಿಸು, ಬೇಗ ಮೀಟಿಂಗ್ ಮಾಡೋಣ.”

ಮಹಾರಾಷ್ಟ್ರ ಪೊಲೀಸರು ವಿರಾಟ್ ಅನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ನಗದು ಎಲ್ಲಿದೆ? ಗುಜರಾತ್ ರಾಜಕಾರಣಿಯ ಪಾತ್ರ ಎಷ್ಟು? ಇತರರು ಯಾರೆಲ್ಲಾ ಭಾಗಿಯಾಗಿದ್ದಾರೆ? 2000 ರೂಪಾಯಿ ನೋಟು ನಿಷೇಧಿತರೂ ಅದನ್ನು ವೈಟ್ ಮಾಡುವ ಕಾರ್ಯ ಹೇಗೆ ಸಾಧ್ಯವಾಗುತ್ತಿದೆ? ಈ ಪ್ರಶ್ನೆಗಳು ದೇಶದ ಗಮನವನ್ನು ಸೆಳೆಯುತ್ತಿವೆ.

error: Content is protected !!