ಬೆಂಗಳೂರು: ರಾಮಮೂರ್ತಿ ನಗರ ಟೆಕ್ಕಿ, ಮೂಲತಃ ಮಂಗಳೂರಿನ ಕಾವೂರು ನಿವಾಸಿ ಹತ್ಯೆ ಪ್ರಕರಣದಲ್ಲಿ ತನಿಖೆ ತೀವ್ರಗೊಂಡಿದ್ದು, ಆರೋಪಿಯ ವಿಚಾರಣೆಯಲ್ಲಿ ಬೆಚ್ಚಿಬೀಳಿಸುವ ಸತ್ಯಗಳು ಒಂದೊಂದಾಗಿ ಹೊರಬರುತ್ತಿವೆ. ಪ್ರಕರಣವನ್ನು ಅಪಘಾತ ಅಥವಾ ಅಗ್ನಿ ಅವಘಡವೆಂದು ಬಿಂಬಿಸಲು ಯತ್ನಿಸಿದ್ದ ಆರೋಪಿ, ಇದೀಗ ಪೊಲೀಸರ ಮುಂದೆ ಅತ್ಯಾಚಾರ ಯತ್ನ ನಡೆಸಿದ್ದುದನ್ನು ಒಪ್ಪಿಕೊಂಡಿದ್ದಾನೆ.

ತನಿಖೆಯ ಪ್ರಕಾರ, ಮೃತ ಯುವತಿ ಅವರ ನೆರೆಮನೆಯ, ಮೂಲತಃ ಕೇರಳದ ಯುವಕ ಕರ್ನಲ್ (18) ಕಳೆದ ಒಂದೂವರೆ ತಿಂಗಳಿಂದ ಆಕೆಯನ್ನು ಹಿಂಬಾಲಿಸುತ್ತಿದ್ದನು. ದಿನನಿತ್ಯ ಟೆರಸ್‌ನಿಂದ ಶರ್ಮಿಳಾ ಅವರ ಚಲನವಲನಗಳನ್ನು ಗಮನಿಸುತ್ತಿದ್ದ ಆರೋಪಿ, ಆಕೆ ಕೆಲಸಕ್ಕೆ ಹೋಗುವ ಹಾಗೂ ವಾಪಸ್ ಬರುವ ಸಮಯವನ್ನೂ ನಿಖರವಾಗಿ ಗಮನಿಸುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಜನವರಿ 3ರ ರಾತ್ರಿ ಮನೆಗೆ ಒಬ್ಬರೇ ಇದ್ದ ಸಂದರ್ಭವನ್ನು ಬಳಸಿಕೊಂಡು, ಆರೋಪಿ ಯುವತಿ ಮನೆಗೆ ನುಗ್ಗಿದ್ದಾನೆ.

ವಿಚಾರಣೆ ವೇಳೆ ಆರೋಪಿ ನೀಡಿದ ಹೇಳಿಕೆಯಂತೆ, ಯುವತಿ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದಾಗ ಆಕೆ ಜೋರಾಗಿ ಕಿರುಚಿಕೊಂಡಿದ್ದಾಳೆ. ಈ ವೇಳೆ ಆಕೆಯ ಬಾಯಿಯನ್ನು ಬಲವಂತವಾಗಿ ಮುಚ್ಚಿ, ವಿರೋಧಿಸಿದರೂ ಕನಿಕರವಿಲ್ಲದೆ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಘಟನೆಗೆ ಅಗ್ನಿ ಅವಘಡದ ರೂಪ ನೀಡುವ ಉದ್ದೇಶದಿಂದ ಹಾಸಿಗೆಯ ಮೇಲೆ ಟಿಶ್ಯು ಪೇಪರ್ ಇಟ್ಟು ಬೆಂಕಿ ಹಚ್ಚಿ, ಬಾಲ್ಕನಿ ಡೋರ್ ಮೂಲಕ ಪರಾರಿಯಾಗಿದ್ದಾನೆ ಎಂಬುದು ತನಿಖೆಯಿಂದ ದೃಢಪಟ್ಟಿದೆ.

ಆರಂಭದಲ್ಲಿ ಲೈಂಗಿಕ ದೌರ್ಜನ್ಯ ಆರೋಪವನ್ನು ತಳ್ಳಿ ಹಾಕಿದ್ದ ಆರೋಪಿ, ತೀವ್ರ ವಿಚಾರಣೆ ವೇಳೆ ಅತ್ಯಾಚಾರ ಯತ್ನದ ಅಂಶವನ್ನು ಒಪ್ಪಿಕೊಂಡಿರುವುದು ಪ್ರಕರಣಕ್ಕೆ ಮಹತ್ವದ ತಿರುವು ನೀಡಿದೆ. ಸದ್ಯ ಮೃತಳ ಪೋಸ್ಟ್‌ಮಾರ್ಟಂ ವರದಿ, ಮೆಡಿಕಲ್ ಸ್ಯಾಂಪಲ್‌ಗಳು ಹಾಗೂ ಸ್ಥಳದಿಂದ ಸಂಗ್ರಹಿಸಲಾದ ಸಾಕ್ಷ್ಯಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಅತ್ಯಾಚಾರ ಮತ್ತು ಕೊಲೆ ಆರೋಪಗಳನ್ನು ಇನ್ನಷ್ಟು ಬಲಪಡಿಸುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಮಮೂರ್ತಿ ನಗರದಲ್ಲಿ ನಡೆದ ಈ ಭೀಕರ ಘಟನೆ, ಮಹಿಳೆಯರ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದು, ಪ್ರಕರಣದ ಪ್ರತಿಯೊಂದು ಅಂಶವನ್ನು ಸೂಕ್ಷ್ಮವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.