ಕೋಡಿಬೆಂಗ್ರೆ ಬಳಿ ಟೂರಿಸ್ಟ್ ಬೋಟ್ ದುರಂತ ಪ್ರಕರಣ: ಇಬ್ಬರು ಸಾವು

ಉಡುಪಿ: ಜಿಲ್ಲೆಯ  ಮಲ್ಪೆ ಕೋಡಿಬೆಂಗ್ರೆ ಸಮೀಪದ ಅರಬ್ಬಿ ಸಮುದ್ರದಲ್ಲಿ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಟೂರಿಸ್ಟ್ ಬೋಟ್ ಮಗುಚಿ ಬಿದ್ದ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಪ್ರವಾಸಿಗರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಮೈಸೂರಿನ ಸರಸ್ವತಿಪುರಂನಿಂದ ಪ್ರವಾಸಕ್ಕೆ ಆಗಮಿಸಿದ್ದ ಬಿಪಿಒ ಕಾಲ್ ಸೆಂಟರ್ ಉದ್ಯೋಗಿಗಳ ತಂಡದವರು ಎರಡು ಪ್ರವಾಸಿ ಬೋಟ್‌ಗಳಲ್ಲಿ ವಿಹಾರಕ್ಕೆ ತೆರಳಿದ್ದ ವೇಳೆ, ಕೋಡಿಬೆಂಗ್ರೆ ಅಳಿವೆ ಬಾಗಿಲಿನ ಬಳಿ ಸಮುದ್ರದ ಭಾರೀ ಅಲೆಗಳಿಗೆ ಸಿಲುಕಿದ ಒಂದು ಬೋಟ್ ಅಚಾನಕ್ ಮಗುಚಿ ಬಿದ್ದಿತ್ತು. ಅಪಘಾತದಲ್ಲಿ ಸಮುದ್ರದಲ್ಲಿ ಮುಳುಗಿದ್ದ ಪ್ರವಾಸಿಗರನ್ನು ಸ್ಥಳೀಯರು ಮತ್ತು ಮೀನುಗಾರರು ಸಮಯಕ್ಕೆ ಸರಿಯಾಗಿ ರಕ್ಷಿಸಿ ಹೊರತೆಗೆದಿದ್ದರು.

ಅಪಘಾತದಲ್ಲಿ ಶಂಕರಪ್ಪ (22) ಮತ್ತು ಸಿಂಧು (23) ಸೇರಿದಂತೆ ನಾಲ್ವರು ಪ್ರವಾಸಿಗರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಈ ಇಬ್ಬರೂ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ಮೂಲಗಳು ದೃಢಪಡಿಸಿವೆ. ಧರ್ಮರಾಜ್ ಮತ್ತು ದಿಶಾ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ತೀವ್ರ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳಿಗೆ ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಇತರೆ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಥಮಿಕ ಚಿಕಿತ್ಸೆ ಬಳಿಕ ಬಿಡುಗಡೆ ಮಾಡಲಾಗಿದೆ.

ಮಲ್ಪೆ: ಪ್ರವಾಸಿಗರ ದೋಣಿ ಮಗುಚಿ ಬಿದ್ದು ಹಲವರು ಅಸ್ವಸ್ಥ- ಇಬ್ಬರು ಗಂಭೀರ

ಪ್ರಾಥಮಿಕ ತನಿಖೆಯಲ್ಲಿ ಕೆಲ ಪ್ರವಾಸಿಗರು ಲೈಫ್ ಜಾಕೆಟ್ ಧರಿಸಿರಲಿಲ್ಲ ಎಂಬ ಮಾಹಿತಿ ಹೊರಬಂದಿದ್ದು, ಅಪಘಾತಕ್ಕೆ ಸುರಕ್ಷತಾ ನಿಯಮಗಳ ಉಲ್ಲಂಘನೆಯೇ ಕಾರಣವೇ? ಎಂಬ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಈ ಘಟನೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸಂಬಂಧಪಟ್ಟ ಟೂರಿಸ್ಟ್ ಬೋಟ್ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಈ ದುರಂತವು ಸಮುದ್ರ ವಿಹಾರಕ್ಕೆ ಸಂಬಂಧಿಸಿದ ಸುರಕ್ಷತಾ ನಿಯಮಗಳ ಪಾಲನೆ ಕುರಿತಾಗಿ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.

error: Content is protected !!