ಉಡುಪಿ/ಸಾಸ್ತಾನ: ಗಣರಾಜ್ಯೋತ್ಸವದ ಮುನ್ನ ದಿನದ ಪಾವನ ರಾತ್ರಿ, ದೇಶದ ತ್ರಿವರ್ಣ ಧ್ವಜಕ್ಕೆ ಗೌರವ ಸಲ್ಲಿಸಬೇಕಾದ ಕ್ಷಣದಲ್ಲಿ, ಸಾಸ್ತಾನ ಟೋಲ್ ಪ್ಲಾಝಾದಲ್ಲಿ ರಾಷ್ಟ್ರವೇ ತಲೆತಗ್ಗಿಸುವಂತಹ ಘಟನೆ ನಡೆದಿದೆ. ದೇಶಕ್ಕಾಗಿ ಹೋರಾಡಿ, ಇಂದು ವಿಕಲಚೇತನರಾಗಿ ಇಂದು ಗಾಲಿಚಕ್ರದ ಮೇಲೆ ಬದುಕು ಸಾಗಿಸುತ್ತಿರುವ ನಿವೃತ್ತ ಯೋಧ ಶ್ಯಾಮರಾಜ್ ಅವರಿಗೆ ಟೋಲ್ ಪ್ಲಾಝಾ ಸಿಬ್ಬಂದಿಯಿಂದ ಅಪಮಾನ, ತಿರಸ್ಕಾರ ಮತ್ತು ನಿರ್ಲಕ್ಷ್ಯ ಎದುರಾಗಿದೆ. ಈ ಘಟನೆಗೆ ಸಾಕ್ಷಿಯಾಗಿ ಯೋಧ ತಾವೇ ಚಿತ್ರೀಕರಿಸಿದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದೇಶದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಕಾಸರಗೋಡು ಜಿಲ್ಲೆಯ ಎಡನೀರು ಸಮೀಪದ ಎದಿರ್ತೋಡು ನಿವಾಸಿಯಾದ ಶ್ಯಾಮರಾಜ್, ಭಾರತೀಯ ಸೇನೆಯ 21ನೇ ಪ್ಯಾರಾ ಸ್ಪೆಷಲ್ ಫೋರ್ಸ್‌ನ ಪ್ಯಾರಾಟ್ರೂಪರ್ ಆಗಿ ಸೇವೆ ಸಲ್ಲಿಸಿದ ವೀರಯೋಧ. ದೇಶದ ಗಡಿಗಳನ್ನು ಕಾಪಾಡುವ ವೇಳೆ ಉಗ್ರರ ವಿರುದ್ಧ ಹೋರಾಡಿದ ಈ ಯೋಧ, ಪತ್ನಿಯೊಂದಿಗೆ ಸಾಸ್ತಾನ ಟೋಲ್ ಮೂಲಕ ಸಾಗುತ್ತಿದ್ದಾಗ, ಅಧಿಕೃತ ಟೋಲ್ ವಿನಾಯಿತಿ ಪತ್ರವಿದ್ದರೂ ತಾಸುಗಟ್ಟಲೆ ತಡೆದು ನಿಲ್ಲಿಸಲ್ಪಟ್ಟಿದ್ದಾರೆ. ದೇಶದ ಎಲ್ಲ ಟೋಲ್‌ಗಳಲ್ಲಿ ಗೌರವ ಪಡೆಯುವ ಯೋಧರಿಗೆ, ಸಾಸ್ತಾನ ಟೋಲ್‌ನಲ್ಲಿ ಮಾತ್ರ ಅವಮಾನವೇ ಉತ್ತರವಾಗಿದೆ ಎಂಬ ಆರೋಪ ಕೇಳಿಬಂದಿದೆ.

ಯೋಧನ ಪತ್ನಿಯೂ ಮಿಲಿಟರಿ ನರ್ಸಿಂಗ್ ಸೇವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅಧಿಕೃತ ಪೋಸ್ಟಿಂಗ್ ಸಂಬಂಧ ಪ್ರಯಾಣಿಸುತ್ತಿದ್ದರೂ, ಟೋಲ್ ಪ್ಲಾಝಾ ಸಿಬ್ಬಂದಿಯ ವರ್ತನೆ ಮಾನವೀಯತೆ, ರಾಷ್ಟ್ರಭಕ್ತಿ ಮತ್ತು ಸಂವಿಧಾನಾತ್ಮಕ ಮೌಲ್ಯಗಳಿಗೆ ಧಕ್ಕೆ ತಂದಿದೆ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಆರ್‌ಎಂಎ ನೀಡಿದ ಟೋಲ್ ವಿನಾಯಿತಿ ಪತ್ರ ತೋರಿಸಿದರೂ ನಿರಾಕರಣೆ ಮುಂದುವರಿದಿದ್ದು, ಇದು ಕೇವಲ ನಿರ್ಲಕ್ಷ್ಯವಲ್ಲ, ನಮ್ಮ ಯೋಧ ಸಂಸ್ಕೃತಿಗೆ ಮಾಡಿದ ನೇರ ಅವಮಾನ ಎಂದು ಟೀಕಿಸಲಾಗಿದೆ.

ಈ ಘಟನೆ ಬೆಳಕಿಗೆ ಬಂದ ನಂತರ, ಗಣರಾಜ್ಯೋತ್ಸವದ ದಿನದಂದೇ ನಿವೃತ್ತ ಸೈನಿಕನಿಗೆ ಮಾಡಲಾದ ಈ ವರ್ತನೆಗೆ ದೇಶದಾದ್ಯಂತ ತೀವ್ರ ಆಕ್ರೋಶ, ಧಿಕ್ಕಾರ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ “ಯೋಧರಿಗೆ ಗೌರವ ಇಲ್ಲವೇ?”, “ಇದೇನಾ ನಮ್ಮ ರಾಷ್ಟ್ರಭಕ್ತಿ?” ಎಂಬ ಪ್ರಶ್ನೆಗಳು ಪ್ರತಿಧ್ವನಿಸಿವೆ. ವ್ಯಾಪಕ ವಿರೋಧದ ಬಳಿಕ ಮಾತ್ರ ಟೋಲ್ ಪ್ಲಾಝಾ ಸಿಬ್ಬಂದಿ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿದ್ದಾರೆ ಎನ್ನಲಾಗಿದೆ. ಆದರೆ ಸಾರ್ವಜನಿಕ ವಲಯದಲ್ಲಿ, “ಕ್ಷಮೆಯಾಚನೆ ಸಾಕೆ? ಹೊಣೆಗಾರಿಕೆ ಯಾರು ಹೊರುತ್ತಾರೆ?” ಎಂಬ ಪ್ರಶ್ನೆಗಳು ಉಳಿದಿವೆ.
ವಿಶೇಷವಾಗಿ ಗಮನಾರ್ಹವೆಂದರೆ, ಶ್ಯಾಮರಾಜ್ ಅವರು ಆಪರೇಶನ್ ಪರಾಕ್ರಮ್ ವೇಳೆ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿ ವಾಪಸ್ ಬರುತ್ತಿದ್ದಾಗ, ಅವರ ವಾಹನ ಲ್ಯಾಂಡ್‌ಮೈನ್ ಸ್ಫೋಟಕ್ಕೆ ಒಳಗಾಗಿದ್ದು, ಆ ಭೀಕರ ಘಟನೆಯಲ್ಲಿ 15 ಸೈನಿಕರು ಹುತಾತ್ಮರಾಗಿದ್ದರು. ಆ ಘಟನೆಯಲ್ಲಿ ಜೀವ ಉಳಿಸಿಕೊಂಡ ಶ್ಯಾಮರಾಜ್, 15 ದಿನಗಳ ಕಾಲ ಕೋಮಾದಲ್ಲಿದ್ದು, ನಂತರ ಚೇತರಿಸಿಕೊಂಡರೂ ಬೆನ್ನುಹುರಿಗೆ ಗಂಭೀರ ಗಾಯವಾಗಿ ಸಂಪೂರ್ಣ ವಿಕಲಾಂಗರಾಗಿದ್ದಾರೆ. ಇಂತಹ ವೀರಯೋಧನಿಗೆ ಗಣರಾಜ್ಯೋತ್ಸವದ ಮುನ್ನ ದಿನವೇ ಅವಮಾನ ಮಾಡಿರುವುದು ರಾಷ್ಟ್ರದ ಆತ್ಮಸಾಕ್ಷಿಗೆ ಹೊಡೆತ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶಕ್ಕಾಗಿ ದೇಹವನ್ನೇ ತ್ಯಾಗ ಮಾಡಿದ ಯೋಧರಿಗೆ ಗೌರವ ನೀಡಲು ವಿಫಲವಾದರೆ ನಮ್ಮ ರಾಷ್ಟ್ರಭಕ್ತಿ ಕೇವಲ ಘೋಷಣೆಯಲ್ಲವೇ? ಎಂಬ ಪ್ರಶ್ನೆಯನ್ನು ಈ ಘಟನೆ ಎತ್ತಿದೆ. ಸಾಸ್ತಾನ ಟೋಲ್ ಪ್ಲಾಝಾದ ಈ ಘಟನೆಗೆ ಸಂಬಂಧಿಸಿದಂತೆ ಜವಾಬ್ದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ದಿನೇದಿನೇ ಬಲಗೊಳ್ಳುತ್ತಿದೆ.