ಬೆಳ್ತಂಗಡಿ: ತಾಲೂಕಿನ ಗುರಿಪಳ್ಳದಲ್ಲಿ ಬೆಳಿಗ್ಗೆ ಮನೆಯ ಬಳಿ ನೀರಿನ ಪಂಪ್ ಆನ್ ಮಾಡುವ ಸಂದರ್ಭದಲ್ಲಿ ವಿದ್ಯುತ್ ಆಘಾತಕ್ಕೊಳಗಾಗಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಸಂಭವಿಸಿದೆ. ಗುರಿಪಳ್ಳ ಬಳಿಯ ಕಡಿಯಾರು ಗ್ರಾಮದ ನಿವಾಸಿ ಶಿವಪ್ರಸಾದ್ ಆದಪ್ಪ(48) ಮೃತ ದುರ್ದೈವಿ.

ಶಿವಪ್ರಸಾದ್ ತಮ್ಮ ದಿನನಿತ್ಯದ ಬೆಳಗಿನ ಕೆಲಸಕ್ಕೆ ಹೊರಟಿದ್ದರು. ಆ ವೇಳೆ ನೀರಿನ ಪಂಪ್ ಆನ್ ಮಾಡುವಾಗ ವಿದ್ಯುತ್ ಸ್ಪರ್ಶಿಸಿ ನೆಲಕ್ಕೆ ಉರುಳಿ ಬಿದ್ದು ತೀವ್ರ ಗಾಯಗೊಂಡಿದ್ದರು. ಅವರನ್ನು ತಕ್ಷಣ ಉಜಿರೆಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟು ಹೊತ್ತಿಗೆ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆ ಮತ್ತು ಇತರ ವಿಧಿವಿಧಾನಗಳಿಗಾಗಿ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

