ಕೇಂದ್ರ ಮೈದಾನದಲ್ಲಿ ಭವ್ಯ ಗಣರಾಜ್ಯೋತ್ಸವ: ದಿನೇಶ್‌ ಗುಂಡೂರಾವ್‌ರಿಂದ ಧ್ವಜಾರೋಹಣ

ಮಂಗಳೂರು: ನಗರದ ಕೇಂದ್ರ ಮೈದಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಸಮಾರಂಭವು ಇಂದು ಭವ್ಯವಾಗಿ ನಡೆಯಿತು. ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಅವರು ಸಮಾರಂಭದಲ್ಲಿ ಭಾಗವಹಿಸಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.

ಧ್ವಜಾರೋಹಣದ ನಂತರ ಸಚಿವ ದಿನೇಶ್‌ ಗುಂಡೂರಾವ್ ಅವರು ತೆರೆದ ಜೀಪಿನಲ್ಲಿ ಪಿರೇಡ್‌ ಮೈದಾನ ಸಾಗಿ ಪೊಲೀಸರ ಗೌರವ ವಂದನೆ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, ಭಾರತೀಯ ಸಂವಿಧಾನದ ಮೌಲ್ಯಗಳು, ಪ್ರಜಾಪ್ರಭುತ್ವ, ಸಮಾನತೆ ಮತ್ತು ಸಹೋದರತ್ವದ ಮಹತ್ವವನ್ನು ನೆನಪಿಸಿದರು. ಸರ್ಕಾರದ ಜನಪರ ಯೋಜನೆಗಳು ಸಮಾಜದ ಪ್ರತಿಯೊಬ್ಬರಿಗೂ ತಲುಪುವಂತೆ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜನಗಣಮನ ರಾಷ್ಟ್ರಗೀತೆ ಮೊಳಗಿದ್ದು, ಸಮಾರಂಭಕ್ಕೆ ಆಗಮಿಸಿದ್ದ ಗಣ್ಯರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ರಾಷ್ಟ್ರಗೀತೆಗೆ ಗೌರವ ಸಲ್ಲಿಸಿದರು. ಪೊಲೀಸ್‌, ಗೃಹರಕ್ಷಕ ದಳ, ಎನ್‌ಸಿಸಿ ಹಾಗೂ ವಿದ್ಯಾರ್ಥಿಗಳ ಪಿರೇಡ್‌ ಕಾರ್ಯಕ್ರಮ ಗಮನ ಸೆಳೆಯಿತು.

ಸಮಾರಂಭದಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್‌ವಿ, ಪೊಲೀಸ್‌ ಕಮಿಷನರ್‌ ಸುಧೀರ್‌ ಕುಮಾರ್‌ ರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಗಣ್ಯರು ಉಪಸ್ಥಿತರಿದ್ದರು. ಕಟ್ಟುನಿಟ್ಟಿನ ಭದ್ರತೆ ಮತ್ತು ಶಿಸ್ತುಬದ್ಧ ವ್ಯವಸ್ಥೆಯೊಂದಿಗೆ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನವಾಯಿತು.

error: Content is protected !!