ಬೆಟ್ಟಿಂಗ್‌ನಲ್ಲಿ ಗೆದ್ದ ಹಣ ಕೊಡದೆ ವಂಚನೆ: ಐವರ ಬಂಧನ

ಉಡುಪಿ: ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ಗೆದ್ದ 15 ಲಕ್ಷ ರೂ. ಹಣ ನೀಡದೆ ಜೀವಬೆದರಿಕೆ ಹಾಕಿದ್ದಾಗಿ ಬಂದಿರುವ ದೂರಿನ ಆಧಾರದ ಮೇಲೆ ಕೋಟ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಶಿರಿಯಾರ ಗ್ರಾಮದ ಎತ್ತಿನಟ್ಟಿಯ ರೂಪೇಶ್(23), ಮನೋಜ್(25), ಕೊಳ್ಕೆಬೈಲುವಿನ ಸೃಜನ್ ಶೆಟ್ಟಿ(28), ಪಡುಮುಂಡುವಿನ ರಾಘವೇಂದ್ರ (37), ಶಿರಿಯಾರ ಕುಶಲ(38) ಬಂಧಿತ ಆರೋಪಿಗಳು.

ಬಿಲ್ಲಾಡಿಯ ಸಂದೇಶ್ ಕುಲಾಲ್ ಎಂಬಾತನಿಗೆ ಸುಮಾರು ಒಂದು ವರ್ಷದ ಹಿಂದೆ ಆನ್‌ಲೈನ್ ಬೆಟ್ಟಿಂಗ್ ನಡೆಸುತ್ತಿದ್ದ ಶಿರಿಯಾರ ನಿವಾಸಿ ಪ್ರದೀಪ್ ಪರಿಚಯವಾಗಿತ್ತು. ಪ್ರದೀಪ್‌ ನೀಡಿದ ಸೂಚನೆಯಂತೆ ಸಂದೇಶ್ ಕುಲಾಲನು ರೂಪೇಶ್, ಮನೋಜ್, ಧೀರಜ್, ಹರೀಶ, ವಿದೇಶ್ ಹಾಗೂ ಇತರೆ ವ್ಯಕ್ತಿಗಳ ಮೊಬೈಲ್ ನಂಬರ್‌ಗಳಿಗೆ ಆನ್‌ಲೈನ್ ಮೂಲಕ ಹಣ ವರ್ಗಾವಣೆ ಮಾಡಿದ್ದನು. ಈ ವೇಖೆ ಸಂದೇಶ್ ಕುಲಾಲ್ ಬೆಟ್ಟಿಂಗ್‌ನಲ್ಲಿ ಸುಮಾರು 15 ಲಕ್ಷ ರೂ. ಹಣವನ್ನು ಗೆದ್ದಿದ್ದಾನೆ. ಆದರೆ ಆರೋಪಿಗಳು ಹಣವನ್ನು ನೀಡಲಿಲ್ಲ ಎನ್ನುವುದು ಸಂತೋಷ್‌ ಕುಲಾಲ್‌ ಆರೋಪವಾಗಿದೆ.

ಒಂದು ತಿಂಗಳ ಹಿಂದೆ ಶಿರಿಯಾರದಲ್ಲಿ ಪ್ರದೀಪ್‌ನನ್ನು ಭೇಟಿ ಮಾಡಿದ್ದ ಸಂತೋಷ್‌ ತಾನು ಗೆದ್ದ 15ಲಕ್ಷ ರೂ. ಹಣ ನೀಡುವಂತೆ ಕೇಳಿದ್ದನು. ಆಗ ಪ್ರದೀಪ್, ಆತನ ತಂಡವರು ಹಣವನ್ನು ನಿನಗೆ ಕೊಡುವುದಿಲ್ಲ ಎಂದೆಲ್ಲಾ ಹೇಳಿಕೊಂಡು ಜೀವ ಬೆದರಿಕೆ ಹಾಕಿರುವುದಾಗಿ ಕೋಟ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿತ್ತು.

error: Content is protected !!