ಬೆಂಗಳೂರು: ರಜೆ ಅನ್ನೋದು ಜನರಿಗೆ ಉಸಿರಾಡೋ ಸಮಯ. ಆದ್ರೆ ಖಾಸಗಿ ಬಸ್ ಮಾಲೀಕರಿಗೆ ಅದು ಹೆಚ್ಚುವರಿ ಆದಾಯದ ಋತು. ವೀಕೆಂಡ್ ಜೊತೆಗೆ ಗಣರಾಜ್ಯೋತ್ಸವ ಸೇರಿದಾಗ ಜನರು ಊರಿಗೆ ಹೊರಡುವ ಮುನ್ನ ಬ್ಯಾಗ್ ಪ್ಯಾಕ್ ಮಾಡ್ತಾರೆ. ಖಾಸಗಿ ಬಸ್‌ಗಳು ಅದಕ್ಕೂ ಮುಂಚೆ ದರ ಪ್ಯಾಕ್ ಮಾಡ್ತವೆ.

ಸಾಮಾನ್ಯ ದಿನಗಳಲ್ಲಿ ₹500–₹800ಕ್ಕೆ ಸಿಗುತ್ತಿದ್ದ ಟಿಕೆಟ್ ರಜೆ ಬಂದ ದಿನ ₹1500–₹2000 ಆಗಿಬಿಡುತ್ತದೆ. ಇದು ಯಾದೃಚ್ಛಿಕ ಏರಿಕೆ ಅಲ್ಲ, ಪ್ರತಿ ರಜೆಗೆ ಸಿದ್ಧವಾಗಿರುವ ವ್ಯವಸ್ಥಿತ ಲೆಕ್ಕಾಚಾರ. ಊರಿಗೆ ಹೋಗೋದು ಕನಸಾಗ್ತಿದೆಯಾ? ಇಲ್ವೇ ಇಲ್ಲ.

ಬೆಂಗಳೂರಲ್ಲಿ ದುಡೀತಿರುವ ಮಧ್ಯಮ ವರ್ಗದ ಕುಟುಂಬಕ್ಕೆ ರಜೆ ಅಂದ್ರೆ ಊರು, ಅಮ್ಮ-ಅಪ್ಪ, ಮನೆಯ ಊಟ… ಸ್ವಲ್ಪ ಮನಸ್ಸಿಗೆ ನೆಮ್ಮದಿ. ಆದ್ರೆ ಈಗ ರಜೆ ಬಂದರೂ ಟಿಕೆಟ್ ದರ ನೋಡಿದರೆ ಮನಸ್ಸಿಗಿಂತ ಮೊದಲು ಕೈ ನಡುಗುತ್ತದೆ. “ರಜೆ ಅಂದ್ರೆ ಖರ್ಚು ಜಾಸ್ತಿ, ಬೇರೆ ದಿನ ಹೋಗೋಣ” ಎನ್ನೋ ಮಾತುಗಳು ಬಸ್ ಸ್ಟ್ಯಾಂಡ್‌ಗಳಲ್ಲಿ ಸಾಮಾನ್ಯವಾಗಿವೆ.

ಖಾಸಗಿ ಬಸ್‌ಗಳ ಬಳಿ ಒಂದೇ ಉತ್ತರ, “ಡಿಮ್ಯಾಂಡ್ ಇದೆ ಸಾರ್.” ಹೌದು, ಡಿಮ್ಯಾಂಡ್ ಇದೆ. ಆದ್ರೆ ಜನರ ಅವಶ್ಯಕತೆಯನ್ನು ಅವಕಾಶ ಮಾಡಿಕೊಂಡರೆ ಅದು ಡಿಮ್ಯಾಂಡ್ ಅಲ್ಲ, ದರದ ದಂಡ. ಸ್ಲೀಪರ್ ಬಸ್‌ನಲ್ಲಿ ಮಲಗಿದರೆ. ನಿದ್ರೆ ಬರಬೇಕು. ಇವತ್ತು ದರ ನೋಡಿ ನಿದ್ದೆ ಹೋಗಿಬಿಟ್ಟಿದೆ.

ಈ ಎಲ್ಲಾ ಏರಿಕೆಗಳ ಮಧ್ಯೆ ಸಾರಿಗೆ ಇಲಾಖೆ ಕಾಣಿಸುತ್ತಿಲ್ಲ. ದರ ನಿಯಂತ್ರಣ ಎನ್ನೋ ಪದ ಕಾಗದದಲ್ಲಿ ಮಾತ್ರ ಉಳಿದಿದೆ. ಜನ ಕೇಳೋದಿಷ್ಟೆ… “ಖಾಸಗಿ ಅನ್ನೋದಕ್ಕೆ ಏನು ಬೇಕಾದರೂ ಮಾಡಬಹುದಾ?” ಉತ್ತರ ಯಾರಲ್ಲೂ ಇಲ್ಲ. ನರು ಊರಿಗೆ ಹೋಗಬೇಕು ಅನ್ನೋದು ಸಹಜ. ಅದೇ ಸಮಯದಲ್ಲಿ ಬಸ್ ಮಾಲೀಕರು ಜನರ ಜೇಬಿಗೆ ಕನ್ನಡ ಹಾಕ್ತಾರೆ ಎನ್ನೋದು ಇನ್ನೂ ಸಹಜವಾಗಿಬಿಟ್ಟಿದೆ. ಇದು ದೊಡ್ಡ ಅಪರಾಧದ ಕಥೆ ಅಲ್ಲ. ಆದ್ರೆ ಸಣ್ಣ ಸಣ್ಣ ದರ ಏರಿಕೆಗಳ ಮೂಲಕ ನಡೆಯುವ ನಿತ್ಯದ ಲೂಟಿ ಕಥೆ.