ಬೆಂಗಳೂರು: ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ತಿಂಗಳಿಗೆ ಒಂದು ದಿನ ಮುಟ್ಟಿನ ರಜೆ ನೀಡುವ ಸರ್ಕಾರದ ತೀರ್ಮಾನಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಈ ನಡುವೆ, ಕೆಲ ಪುರುಷ ನೌಕರರು ʻಮಹಿಳೆಯರಿಗೆ ರಜೆ ಹೆಚ್ಚಾದಂತೆ ನಮಗೆ ಕೆಲಸ ಹೆಚ್ಚಾಗುತ್ತೆʼ ಎಂದು ಅಸಮಾಧಾನ ವ್ಯಕ್ತಪಡಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಪುರುಷ ನೌಕರರು ರಾಜ್ಯ ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ನೌಕರರ ಸಂಘದ ಅಧ್ಯಕ್ಷ ಹಾಗೂ ಸಚಿವಾಲಯ ನೌಕರರ ಸಂಘಕ್ಕೆ ದೂರು ಸಲ್ಲಿಸಿದ್ದಾರೆ. ಸೂಕ್ತ ಅಧ್ಯಯನ ಹಾಗೂ ವರದಿ ಇಲ್ಲದೆ ಮುಟ್ಟಿನ ರಜೆ ಜಾರಿಗೊಳಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಈ ರಜೆಯಿಂದ ಪುರುಷ ನೌಕರರ ಮೇಲೆ ಹೆಚ್ಚುವರಿ ಕಾರ್ಯದೊತ್ತಡ, ಕಚೇರಿಗಳಲ್ಲಿ ಸಾಮರಸ್ಯ ಹದಗೆಡುವ ಭೀತಿ ಹಾಗೂ ಶಾಲಾ ಪರೀಕ್ಷೆ, ಚುನಾವಣಾ ಕರ್ತವ್ಯ, ಆರೋಗ್ಯ–ಶಿಕ್ಷಣ ಇಲಾಖೆ ಮುಂತಾದ ಅತ್ಯಾವಶ್ಯಕ ಸೇವೆಗಳಲ್ಲಿ ಗೊಂದಲ ಉಂಟಾಗಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಇದೇ ವೇಳೆ, ಈಗಾಗಲೇ ಸರ್ಕಾರಿ ನೌಕರರಿಗೆ ಇರುವ 2ನೇ–4ನೇ ಶನಿವಾರ, ಸಾಂದರ್ಭಿಕ, ನಿರ್ಬಂಧಿತ, ಗಳಿಕೆ, ಅರ್ಧವೇತನ ರಜೆಗಳು, ಮಹಿಳಾ ನೌಕರರಿಗೆ ಇರುವ ಹೆರಿಗೆ, ಶಿಶುಪಾಲನಾ ರಜೆಗಳ ನಡುವೆ ಮತ್ತೊಂದು ರಜೆ ಸೇರಿಸಿದರೆ ಕೆಲಸಕ್ಕಿಂತ ರಜೆಯೇ ಜಾಸ್ತಿಯಾಗುತ್ತದೆ ಎಂಬುದು ಪುರುಷ ನೌಕರರ ಅಳಲು.
