ಬಿಸಿಯೂಟದ ರೂಮಲ್ಲಿ ʻಬಿಸಿ ಬಿಸಿ’ ಪ್ರೇಮ ಪುರಾಣ: ಅಧ್ಯಕ್ಷೆ ಜೊತೆ ಸಿಕ್ಕಿಬಿದ್ದ ಹೆಡ್‌ ಮಾಸ್ಟರ್‌ಗೆ ಬಿತ್ತು ಗೂಸ!

ರೂರ್ಕೆಲಾ: ಅಕ್ಷರ ಕಲಿಸುವ ಮಾಸ್ಟ್ರು ಅಂದ್ರೆ ಮಕ್ಕಳಿಗೆ ದೇವರಿದ್ದಂತೆ ಎನ್ನುತ್ತಾರೆ. ಆದರೆ ಒಡಿಶಾದ ಈ ರೋಹಿತ್ ಕುಮಾರ್ ರೇ ಎಂಬ ‘ರೋಮಿಯೋ’ ಮಾಸ್ಟರ್ ಪಾಲಿಗೆ ಶಾಲೆ ಅಂದ್ರೆ ಅದು ‘ಸರಸದ ಶಾಲೆ’! ಒಡಿಶಾದ ಸುಂದರಘಡ ಜಿಲ್ಲೆಯ ಸೇವಾಶ್ರಮ ಶಾಲೆಯಲ್ಲಿ ಪಾಠಕ್ಕಿಂತ ಹೆಚ್ಚಾಗಿ ಪ್ರೇಮ ಪುರಾಣವೇ ಸದ್ದು ಮಾಡಿದ್ದು, ಈಗ ಇಡೀ ಊರೇ ಈ ಕಿಲಾಡಿ ಮಾಸ್ಟರ್‌ಗೆ ಸರಿಯಾದ ಶಾಸ್ತಿ ಮಾಡಿದೆ.

ಅಡುಗೆ ಮನೆಯಲ್ಲಿ ಅರಳಿದ ‘ಅಕ್ರಮ’ ಪ್ರೇಮ!
ಬಿಸಿಯೂಟದ ಸೌದೆಯಲ್ಲಿ ಬೆಂಕಿ ಉರಿಯುವುದು ಕಾಮನ್, ಆದರೆ ಈ ಹೆಡ್‌ಮಾಸ್ಟರ್ ಮಾತ್ರ ಬಿಸಿಯೂಟದ ಅಡುಗೆ ಸಹಾಯಕಿ ಜೊತೆ ಪ್ರೇಮದ ಬೆಂಕಿ ಹಚ್ಚಿಕೊಂಡಿದ್ದ. ಅಚ್ಚರಿಯ ವಿಷಯ ಅಂದ್ರೆ, ಆ ಮಹಿಳೆ ಮತ್ಯಾರೋ ಅಲ್ಲ, ಸ್ವತಃ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರ ಪತ್ನಿ! ಬಿಸಿಯೂಟ ಮುಗಿದ ಮೇಲೆ ಕ್ಲಾಸ್ ರೂಮಿನ ಒಳಗೆ ಮಕ್ಕಳಿಗೆ ಪಾಠ ಮಾಡುವವ ಬದಲು, ಅಧ್ಯಕ್ಷರ ಪತ್ನಿ ಜೊತೆ ಈತ ‘ಖಾಸಗಿ ಪಾಠ’ ಶುರು ಮಾಡಿದ್ದ. ಇದನ್ನು ಕಂಡ ಅಧ್ಯಕ್ಷರು ಮತ್ತು ಗ್ರಾಮಸ್ಥರು ರೊಚ್ಚಿಗೆದ್ದು ಏಕಾಏಕಿ ಶಾಲೆಯ ಮೇಲೆ ರೇಡ್ ಮಾಡಿಯೇ ಬಿಟ್ಟರು.

ಧರ್ಮದೇಟು ಮತ್ತು ಚಪ್ಪಲಿ ಹಾರ!
“ನನ್ನ ಹೆಂಡ್ತಿಗೆ ಇವನು ಏನು ಕಲಿಸ್ತಿದ್ದಾನೆ ಅಂತ ನನಗೂ ಗೊತ್ತು” ಎಂದು ಗರಂ ಆದ ಅಧ್ಯಕ್ಷರು ಮತ್ತು ಊರಿನ ಮಂದಿ, ಮಾಸ್ಟರ್‌ಗೆ ಹಿಗ್ಗಾಮುಗ್ಗಾ ಚಚ್ಚಿದ್ದಾರೆ. ಅಷ್ಟಕ್ಕೇ ಬಿಡದೆ, ಅವನ ಕೊರಳಿಗೆ ಚಪ್ಪಲಿ ಹಾರ ಹಾಕಿ, ಇಡೀ ಗ್ರಾಮದಲ್ಲಿ ಮೆರವಣಿಗೆ ಮಾಡಿಸಿದ್ದಾರೆ. ಶಾಲೆಯ ಆವರಣದಲ್ಲಿ ‘ಕಲ್ಲು-ಬೂಟು’ಗಳ ಪ್ರದರ್ಶನ ಕಂಡು ಪುಟ್ಟ ಮಕ್ಕಳು ಮಾತ್ರ ಬೆಚ್ಚಿಬಿದ್ದಿದ್ದಾರೆ.

ಪೊಲೀಸರು ಬಂದು ಈ ‘ರೋಮಿಯೋ’ನ ಇತಿಹಾಸ ಕೆದಕಿದಾಗ ಅಸಲಿ ವಿಷಯ ಬಯಲಾಗಿದೆ. ಈ ಮಹಾನುಭಾವ ಈ ಹಿಂದೆಯೂ ಅಸಿಸ್ಟೆಂಟ್ ಟೀಚರ್ ಜೊತೆ ಸರಸವಾಡಿ ಸಿಕ್ಕಿಬಿದ್ದು, ಜೈಲು ದರ್ಶನ ಮಾಡಿ ಬಂದವನು! ವರ್ಗಾವಣೆಯಾಗಿ ಇಲ್ಲಿಗೆ ಬಂದ ಮೇಲಾದರೂ ಬುದ್ಧಿ ಕಲಿತಾನಾ ಅಂದ್ರೆ, ಇಲ್ಲಿ ಬಂದು ನೇರವಾಗಿ ಅಧ್ಯಕ್ಷರ ಮನೆಗೇ ಕನ್ನ ಹಾಕಲು ಹೋಗಿ ಈಗ ‘ಧರ್ಮದೇಟು’ ತಿಂದಿದ್ದಾನೆ.

ಕಾನೂನನ್ನು ಕೈಗೆತ್ತಿಕೊಳ್ಳುವುದು ಯಾವತ್ತೂ ಸರಿಯಲ್ಲ. ಮುಖ್ಯೋಪಾಧ್ಯಾಯ ಮಾಡಿದ್ದು ಅಕ್ಷಮ್ಯ ಅಪರಾಧ ಮತ್ತು ನೈತಿಕವಾಗಿ ದೊಡ್ಡ ತಪ್ಪು ಎಂಬಲ್ಲಿ ಸಂಶಯವಿಲ್ಲ; ಆದರೆ ಅದಕ್ಕೆ ಶಿಕ್ಷೆ ನೀಡಲು ಕಾನೂನು ಮತ್ತು ಪೋಲಿಸ್ ವ್ಯವಸ್ಥೆ ಇದೆ. ಗ್ರಾಮಸ್ಥರು ಆತನಿಗೆ ಚಪ್ಪಲಿ ಹಾರ ಹಾಕಿ, ಹಲ್ಲೆ ನಡೆಸಿ ಮೆರವಣಿಗೆ ಮಾಡಿದ್ದು ಅಮಾನವೀಯ ಮತ್ತು ಕಾನೂನುಬಾಹಿರ ಕೃತ್ಯವಾಗಿದೆ. ಇಂತಹ ಘಟನೆಗಳಿಂದ ಸಮಾಜದಲ್ಲಿ ಅರಾಜಕತೆ ಸೃಷ್ಟಿಯಾಗುತ್ತದೆಯೇ ಹೊರತು ನ್ಯಾಯ ಸಿಗುವುದಿಲ್ಲ. ಅದಕ್ಕಾಗಿಯೇ ಪೊಲೀಸರು ಈಗ ಹಲ್ಲೆ ಮಾಡಿದವರನ್ನೂ ಬಂಧಿಸಿದ್ದಾರೆ.

error: Content is protected !!