ಸಸಿಹಿತ್ಲು ಸಮುದ್ರ ತೀರದಲ್ಲಿ ಗಂಗಾರತಿ: ‘ಹಿಂದೂ ಸಮಾಜ ಸಾಗರವಾಗಲಿ’ ಎಂದ ಚಕ್ರವರ್ತಿ ಸೂಲಿಬೆಲೆ

ಮೂಲ್ಕಿ: “ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಯುದ್ಧದ ಭೀತಿಯಿಂದ ರಂಝಾನ್ ಆಚರಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ. ಆದರೆ ಭಾರತದಲ್ಲಿ ಮುಸ್ಲಿಂ ಸಮುದಾಯ ಯಾವುದೇ ಭಯವಿಲ್ಲದೆ ಹಬ್ಬ ಆಚರಿಸುತ್ತಿರುವುದು ನಮ್ಮ ದೇಶದ ತಾಕತ್ತು,” ಎಂದು ಪ್ರಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಸಸಿಹಿತ್ಲು ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಸಮೀಪವಿರುವ ಸಮುದ್ರ ತೀರದಲ್ಲಿ ಆಯೋಜಿಸಲಾಗಿದ್ದ ʻಗಂಗೆಗೆ ನುಡಿ ನಮನ’ ಮತ್ತು ಗಂಗಾರತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಯುದ್ಧದ ಕಾರ್ಮೋಡ ಕವಿದಿರುವ ಮುಸ್ಲಿಂ ರಾಷ್ಟ್ರಗಳಿಗೂ ಭಾರತಕ್ಕೂ ಇರುವ ವ್ಯತ್ಯಾಸವನ್ನು ಒತ್ತಿ ಹೇಳಿದ ಚಕ್ರವರ್ತಿ ಸೂಲಿಬೆಲೆ, ಭಾರತದ ಸೌಹಾರ್ದತೆ ಮತ್ತು ಭದ್ರತೆಯನ್ನು ಶ್ಲಾಘಿಸಿದರು. “ಸ್ವಾಭಿಮಾನ ಕಳೆದುಕೊಂಡು ಬದುಕುವುದಲ್ಲಿ ಅರ್ಥವಿಲ್ಲ. ಇಡೀ ಜಗತ್ತು ಇಂದು ಭಾರತದತ್ತ ನೋಡುತ್ತಿದ್ದು, ಮುಂದಿನ ದಿನಗಳಲ್ಲಿ ದೇಶದ ವೈಭವ ಜಗತ್ತಿಗೆ ಸಾಕ್ಷಿಯಾಗಲಿದೆ,” ಎಂದರು.

ಗಂಗಾರತಿಯು ಕೇವಲ ಧಾರ್ಮಿಕ ವಿಧಿ ಮಾತ್ರವಲ್ಲ, ಅದು ಪರಿಸರ ರಕ್ಷಣೆಯ ಸಂಕೇತವೂ ಹೌದು. ನದಿ ಮತ್ತು ಸಮುದ್ರಗಳು ಸ್ವಚ್ಛವಾದಾಗ ಮಾತ್ರ ನಮ್ಮ ಬದುಕು ಸ್ವಚ್ಛವಾಗುತ್ತದೆ ಎಂದು ಅವರು ಕರೆ ನೀಡಿದರು. ಹಿಂದೂ ಸಮಾಜವು ಸಾಗರದಂತೆ ವಿಶಾಲವಾಗಬೇಕು ಮತ್ತು ಮುಂದಿನ ಪೀಳಿಗೆಯು ಹೆಮ್ಮೆಯಿಂದ ಸಾಗರಕ್ಕೆ ಆರತಿ ಮಾಡುವಂತಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.

error: Content is protected !!