ಮಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ರಾಷ್ಟ್ರೀಯ ಪ್ರತಿನಿಧಿ ಮಂಡಳಿ (NRC) ಸಭೆ ಮಂಗಳೂರಿನಲ್ಲಿ ಜನವರಿ 20 ಮತ್ತು 21ರಂದು ನಡೆಯಿತು. ಈ ಹಿನ್ನೆಲೆಯಲ್ಲಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ, ಪ್ರಭಾರಿ ಅಧ್ಯಕ್ಷ ಮೊಹಮ್ಮದ್ ಶಫಿ ಅವರು ಪತ್ರಿಕಾಗೋಷ್ಠಿ ನಡೆಸಿ, ಸಭೆಯಲ್ಲಿ ಕೈಗೊಳ್ಳಲಾದ ಪ್ರಮುಖ ನಿರ್ಣಯಗಳನ್ನು ಪ್ರಕಟಿಸಿದರು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಜಿ ಅವರನ್ನು ಕಲ್ಪಿತ ಹಾಗೂ ದುರುದ್ದೇಶಪೂರಿತ ಆರೋಪಗಳ ಆಧಾರದಲ್ಲಿ ಜಾರಿ ನಿರ್ದೇಶನಾಲಯ (ED) ಬಂಧಿಸಿರುವುದನ್ನು ಖಂಡಿಸಿದ್ದು, ಇದು ಸಂವಿಧಾನಾತ್ಮಕ ಹಕ್ಕುಗಳ ಮೇಲಿನ ನೇರ ದಾಳಿ ಎಂದು ಮೊಹಮ್ಮದ್ ಶಫಿ ಆರೋಪಿಸಿದರು.
ಪೌರತ್ವ ಸಂಬಂಧಿತ SIR ಪ್ರಕ್ರಿಯೆ ಪ್ರಜಾಪ್ರಭುತ್ವಕ್ಕೆ ಭಾರೀ ಅಪಾಯ ಉಂಟುಮಾಡುವುದರಿಂದ ಅದನ್ನು ತಕ್ಷಣವೇ ರದ್ದುಗೊಳಿಸಬೇಕು. ಅಲ್ಪಸಂಖ್ಯಾತ ಸಮುದಾಯಗಳ ರಕ್ಷಣೆ ಹಾಗೂ ಅವರ ಸಾಮಾಜಿಕ–ಆರ್ಥಿಕ ಸಬಲೀಕರಣಕ್ಕಾಗಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಲಾಯಿತು. ಕೋಮು ಹಿಂಸಾಚಾರ, ದ್ವೇಷ ಅಪರಾಧಗಳು ಹಾಗೂ ತಾರತಮ್ಯದ ಪ್ರಕರಣಗಳಲ್ಲಿ ಯಾವುದೇ ಪಕ್ಷಪಾತವಿಲ್ಲದೆ ಕಟ್ಟುನಿಟ್ಟಿನ ಕ್ರಮ ಅಗತ್ಯವಿದೆ ಎಂದು ತಿಳಿಸಿದರು.

ಕರಾಳ ಮತ್ತು ಅಮಾನವೀಯವಾದ UAPA ಕಾಯ್ದೆಯನ್ನು ರಾಜಕೀಯ ದಬ್ಬಾಳಿಕೆಯ ಸಾಧನವಾಗಿ ಬಳಸಲಾಗುತ್ತಿದೆ ಎಂದು NRC ಅಭಿಪ್ರಾಯಪಟ್ಟಿದ್ದು, ಕಾಯ್ದೆಯನ್ನು ರದ್ದುಗೊಳಿಸಬೇಕು ಅಥವಾ ಸಂವಿಧಾನಾತ್ಮಕ ಮಿತಿಗಳೊಳಗೆ ಆಮೂಲಾಗ್ರವಾಗಿ ತಿದ್ದುಪಡಿ ಮಾಡಬೇಕೆಂದು ಆಗ್ರಹಿಸಿದೆ. ಜೊತೆಗೆ ED, CBI ಸೇರಿದಂತೆ ತನಿಖಾ ಸಂಸ್ಥೆಗಳ ರಾಜಕೀಯ ದುರುಪಯೋಗವನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಲಾಯಿತು ಎಂದು ವಿವರಿಸಿದರು.

ವಿಚಾರಣಾಧೀನ ಕೈದಿಗಳು ಸೇರಿದಂತೆ ದೀರ್ಘಕಾಲದಿಂದ ಜೈಲಿನಲ್ಲಿ ಇರುವ ಕೈದಿಗಳನ್ನು ಬಿಡುಗಡೆ ಮಾಡಬೇಕು, ಸಮಗ್ರ ಜಾತಿ ಜನಗಣತಿ ನಡೆಸಿ ಅದರ ಆಧಾರದ ಮೇಲೆ ಕಲ್ಯಾಣ ನೀತಿಗಳನ್ನು ರೂಪಿಸಬೇಕು ಎಂಬುದೂ NRC ನಿರ್ಣಯಗಳಲ್ಲಿ ಸೇರಿದೆ. ರೈತರ ಜೀವನೋಪಾಯ ಭದ್ರತೆಗೆ ಕಾನೂನುಬದ್ಧ ಕನಿಷ್ಠ ಬೆಂಬಲ ಬೆಲೆ (MSP) ಖಾತರಿ ನೀಡಬೇಕು ಎಂದು ಪಕ್ಷ ಆಗ್ರಹಿಸಿದೆ. ಪೂಜಾ ಸ್ಥಳಗಳ ಕಾಯ್ದೆ–1991 ಅನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದು, ಪ್ಯಾಲೆಸ್ಟೈನ್–ಇಸ್ರೇಲ್ ಸಂಘರ್ಷಕ್ಕೆ ನ್ಯಾಯಯುತ ಎರಡು ರಾಷ್ಟ್ರಗಳ ಪರಿಹಾರಕ್ಕೆ ಬೆಂಬಲ ನೀಡುವುದು ಹಾಗೂ ಸ್ವತಂತ್ರ, ಅಲಿಪ್ತ ವಿದೇಶಾಂಗ ನೀತಿಯನ್ನು ಅನುಸರಿಸುವಂತೆ ಭಾರತ ಸರ್ಕಾರವನ್ನು ಒತ್ತಾಯಿಸಲಾಯಿತು ಎಂದರು.

ಇದೇ ವೇಳೆ, ಉದ್ಯೋಗ ಸೃಷ್ಟಿ, ಸಮಗ್ರ ಗ್ರಾಮೀಣಾಭಿವೃದ್ಧಿ, ಭಾರತದ ಒಕ್ಕೂಟ ಮತ್ತು ಬಹುತ್ವ ಕಲ್ಪನೆಯ ರಕ್ಷಣೆ, ಶಾಸನಬದ್ಧ ಸಮಾನ ಅವಕಾಶ ಆಯೋಗ ಸ್ಥಾಪನೆ, ಅನುಪಾತದ ಪ್ರಾತಿನಿಧ್ಯದೊಂದಿಗೆ ಚುನಾವಣಾ ಸುಧಾರಣೆ, ಶಾಶ್ವತ ಮಿತಿ ನಿಗದಿ ಆಯೋಗ ಹಾಗೂ ಹವಾಮಾನ ಬದಲಾವಣೆಗೆ ತುರ್ತು ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳಬೇಕೆಂದು NRC ಸರ್ಕಾರಕ್ಕೆ ಮನವಿ ಮಾಡಿದೆ. ಸರ್ವಾಧಿಕಾರತ್ವ, ಬಹುಮತದ ಆಳ್ವಿಕೆ, ಲಿಂಚಿಂಗ್ ಹಾಗೂ ಬುಲ್ಡೋಜರ್ ರಾಜಕೀಯವನ್ನು ಸಭೆಯಲ್ಲಿ ಖಂಡಿಸಿದ್ದು, ತಡೆಗಟ್ಟುವ ಬಂಧನ ಕಾನೂನುಗಳ ದುರುಪಯೋಗವನ್ನು ತಕ್ಷಣ ನಿಲ್ಲಿಸಬೇಕೆಂದು ಒತ್ತಾಯಿಸಿದೆ ಎಂದು ಮೊಹಮ್ಮದ್ ಶಾಫಿ ತಿಳಿಸಿದ್ದಾರೆ.
‘ಯಂಗ್ ಡೆಮಾಕ್ರಾಟ್’: ಮಾಜಿ ಸಂಸದ ಉಬೈದುಲ್ಲಾ ಖಾನ್ ಅಝ್ಮಿ
ಮಾಜಿ ಸಂಸದ ಉಬೈದುಲ್ಲಾ ಖಾನ್ ಅಝ್ಮಿ ಮಾತನಾಡಿ, ಭವಿಷ್ಯದಲ್ಲಿ ಪಕ್ಷದ ಬೇರುಗಳನ್ನು ಗಟ್ಟಿಗೊಳಿಸಲು ಯುವ ಘಟಕ ನಾಯಕತ್ವ ತರಬೇತಿ ಘೋಷಣೆ ಮಾಡಿರುವ ಬಗ್ಗೆ ಅವರು ಪ್ರಕಟಿಸಿದರು. ದೇಶದ ಪ್ರಜಾಸತ್ತಾತ್ಮಕ ಮೌಲ್ಯಗಳು, ಅಲ್ಪಸಂಖ್ಯಾತರು, ಎಸ್‌ಸಿ–ಎಸ್‌ಟಿ ಹಾಗೂ ಹಿಂದುಳಿದ ವರ್ಗಗಳ ಧ್ವನಿಯನ್ನು ಬಲಪಡಿಸುವ ಉದ್ದೇಶದಿಂದ ಯುವ ನಾಯಕತ್ವವನ್ನು ರೂಪಿಸುವ ಅಗತ್ಯವಿದೆ. ಭವಿಷ್ಯದ ಸವಾಲುಗಳನ್ನು ಎದುರಿಸಲು ಯುವಕರಿಗೆ ರಾಜಕೀಯ ಅರಿವು, ನಾಯಕತ್ವ ಕೌಶಲ್ಯ ಮತ್ತು ಸಂಘಟನಾ ತರಬೇತಿ ನೀಡುವ ನಿಟ್ಟಿನಲ್ಲಿ ಯೂತ್ ವಿಂಗ್ ಲೀಡರ್‌ಶಿಪ್ ಟ್ರೈನಿಂಗ್ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ಹಿನ್ನೆಲೆ ‘ಯಂಗ್ ಡೆಮಾಕ್ರಾಟ್’ ಎಂಬ ಹೊಸ ವೇದಿಕೆಯನ್ನು ಸಂಘಟಿಸಿ, ಯುವಜನತೆಯನ್ನು ಪ್ರಜಾಸತ್ತಾತ್ಮಕ ಹೋರಾಟಕ್ಕೆ ತಯಾರಿಸುವುದರೊಂದಿಗೆ ಪಕ್ಷದ ಸಂಘಟನೆಯನ್ನು ಬಲಪಡಿಸುವ ಉದ್ದೇಶವನ್ನು ಪ್ರಕಟಿಸಿದರು.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ತಂಬೆ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಎಸ್‌ಡಿಪಿಐ ಯಾವತ್ತಿದ್ದರೂ ಫ್ಯಾಸಿಸ್ಟ್ ಸಿದ್ಧಾಂತಗಳ ವಿರೋಧಿಯೇ ಹೊರತು ಅಗತ್ಯಬಿದ್ದರೆ ಜಾತ್ಯತೀತ ಪಕ್ಷಗಳೊಂದಿಗೆ ಮೈತ್ರಿಗೆ ಸಿದ್ಧವಿದೆ ಎಂದರು. ಎಸ್‌ಡಿಪಿಐ ಬಿಜೆಪಿಯ ʻ ಬಿʼಟೀಂ ಎಂದು ಆರೋಪಿಸುವ ಕಾಂಗ್ರೆಸ್ ನಿಲುವನ್ನು ಆಕ್ಷೇಪಿಸಿದ ಅವರು ಮೊನ್ನೆ ಬಜ್ಪೆ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ, ಹಾಗಾದರೆ ಕಾಂಗ್ರೆಸ್ ಬಿಜೆಪಿಯ ಬೀ ಟೀಮಾ ಎಂದು ಪ್ರಶ್ನಿಸಿದರು.
ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಮಾತನಾಡಿ, ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಧರ್ಮಭೇದವಿಲ್ಲದೆ ಯಾರು ಬೇಕಾದರೂ ಎಸ್‌ಡಿಪಿಐಗೆ ಸೇರಬಹುದು. ಸಮಾಜದ ಎಲ್ಲಾ ವರ್ಗಗಳಿಗೆ ಸಮಾನ ಅವಕಾಶ ನೀಡುವ ನೈತಿಕ ರಾಜಕೀಯವೇ ಎಸ್‌ಡಿಪಿಐಯ ಮೂಲ ತತ್ವವಾಗಿದ್ದು, ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ಗಿಂತ ಪಕ್ಷಕ್ಕೆ ಹೆಚ್ಚು ನೈತಿಕತೆ ಇದೆ ಎಂದು ಅವರು ಹೇಳಿದರು. ಕೊರೊನಾ ಸಂಕಷ್ಟದ ಸಮಯದಲ್ಲಿ ಯಾವುದೇ ರಾಜಕೀಯ ಲಾಭದ ಲೆಕ್ಕವಿಲ್ಲದೆ ಜನಸಾಮಾನ್ಯರ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ನಮ್ಮ ಪಕ್ಷವೇ ಎಂಬುದನ್ನು ನೆನಪಿಸಿದ ಅವರು, ಆ ಕಾಲಘಟ್ಟದಲ್ಲಿ ಅನೇಕ ಪಕ್ಷಗಳು ಮೌನವಾಗಿದ್ದವು ಎಂದು ಟೀಕಿಸಿದರು. ಬಡವರು, ದಮನಿತರು ಮತ್ತು ಸಂಕಷ್ಟದಲ್ಲಿರುವ ಜನರ ಪರವಾಗಿ ನಿಂತು ಕಾರ್ಯನಿರ್ವಹಿಸುವುದೇ ಎಸ್‌ಡಿಪಿಐಯ ರಾಜಕೀಯವಾಗಿದ್ದು, ಇತರ ಪಕ್ಷಗಳಿಗೆ ಆ ಮಟ್ಟದ ನೈತಿಕ ಬದ್ಧತೆ ಕಾಣುವುದಿಲ್ಲ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ , ಉಪಾಧ್ಯಕ್ಷ ಶೈಕ್ ಮೊಹಮ್ಮದ್(ದೆಹ್ಲಾನ್ ಬಾಹ್ಲವಿ), ಜನರಲ್ ಸೆಕ್ರಟೆರಿ ಅಡ್ಮಿನ್ ಮೊಹಮ್ಮದ್ ಅಶ್ರಫ್, ಜನರಲ್ ಸೆಕ್ರೆಟರಿ ಆರ್ಗನೈಸಿಂಗ್ ಮೊಹಮ್ಮದ್ ರಿಯಾಝ್ ಸೇರಿ ವಿವಿಧ ರಾಜ್ಯಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.