ಟೆಹ್ರಾನ್/ವಾಷಿಂಗ್ಟನ್: ವಿಶ್ವ ರಾಜಕೀಯದಲ್ಲಿ ಈಗ ʻಕ್ಷಮೆ’ ಮತ್ತು ‘ಕ್ಷಿಪಣಿ’ ಎರಡೂ ಜೊತೆಜೊತೆಯಾಗಿ ಸಾಗುತ್ತಿವೆ! ಇರಾನ್ ಅಧ್ಯಕ್ಷ ಪೆಜೆಶ್ಕಿಯನ್ ನೆರೆರಾಷ್ಟ್ರಗಳ ಕ್ಷಮೆ ಕೇಳಿ “ನಮ್ಮಿಂದ ತಪ್ಪಾಗಿದೆ” ಎಂದು ಹೇಳಿದ ಕೆಲವೇ ಗಂಟೆಗಳಲ್ಲಿ, ಇಸ್ರೇಲ್ ಮತ್ತು ಅಮೆರಿಕಾ ಜಂಟಿಯಾಗಿ ಇರಾನ್ ಮೇಲೆ ಅಟ್ಯಾಕ್ ಮಾಡಿವೆ. ಟೆಹ್ರಾನ್‌ನ ಮೆಹ್ರಾಬಾದ್ ವಿಮಾನ ನಿಲ್ದಾಣ ಈಗ ಬೆಂಕಿಯ ಕೆನ್ನಾಲಗೆಯಲ್ಲಿ ಬೇಯುತ್ತಿದೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾತು ಈಗ ಪಕ್ಕಾ ‘ರೌಡಿ’ ಶೈಲಿಯಲ್ಲಿದೆ. “ಯಾವುದೇ ಡೀಲ್ ಇಲ್ಲ, ಚರ್ಚೆ ಇಲ್ಲ; ಇರಾನ್ ಬೇಷರತ್ತಾಗಿ ಶರಣಾಗಬೇಕು (Unconditional Surrender), ಇಲ್ಲದಿದ್ದರೆ ಸುಮ್ಮನಿರುವುದಿಲ್ಲ” ಎಂದು ಗುಡುಗಿದ್ದಾರೆ. ಅಮೆರಿಕಾದ ಸೆಂಟ್ರಲ್ ಕಮಾಂಡ್ ಈಗಾಗಲೇ ಇರಾನ್‌ನ ಒಳಗಿರುವ 3,000ಕ್ಕೂ ಹೆಚ್ಚು ಗುರಿಗಳನ್ನು ಪುಡಿಪುಡಿ ಮಾಡಿದೆ ಎಂದು ಹೇಳಿಕೊಂಡಿದೆ.

ಯುದ್ಧದ ಕಿಡಿ ಈಗ ಕೇವಲ ಇರಾನ್‌ಗೆ ಸೀಮಿತವಾಗಿಲ್ಲ. ದುಬೈ ಮತ್ತು ಸೌದಿ ಅರೇಬಿಯಾಗಳ ಮೇಲೂ ದಾಳಿಗಳು ನಡೆಯುತ್ತಿವೆ. ಶನಿವಾರ ಬೆಳಿಗ್ಗೆ ದುಬೈ ಇಂಟರ್ ನ್ಯಾಷನಲ್ ಏರ್‌ಪೋರ್ಟ್ ಬಳಿ ಕ್ಷಿಪಣಿಯ ತುಣುಕುಗಳು ಬಿದ್ದಿವೆ ಎನ್ನಲಾಗಿದ್ದು, ಜನರಲ್ಲಿ ಆತಂಕ ಮನೆಮಾಡಿದೆ. ಅದೃಷ್ಟವಶಾತ್, ಅಲ್ಲಿನ ರಕ್ಷಣಾ ವ್ಯವಸ್ಥೆ ದಾಳಿಯನ್ನು ತಡೆದಿದೆ. ಅತ್ತ ಅಜೆರ್ಬೈಜಾನ್‌ನಲ್ಲಿ ಇರಾನ್‌ನ ʻಸಂಚು’ ಹಣ್ಣಾಗಿದೆ ಎಂದು ವರದಿಯಾಗಿದ್ದು, ತೈಲ ಪೈಪ್‌ಲೈನ್ ಮತ್ತು ಇಸ್ರೇಲ್ ರಾಯಭಾರ ಕಚೇರಿಯ ಮೇಲೆ ಅಟ್ಯಾಕ್ ಮಾಡಲು ಸ್ಕೆಚ್ ಹಾಕಲಾಗಿತ್ತು ಎಂಬ ಆತಂಕಕಾರಿ ವಿಷಯ ಹೊರಬಂದಿದೆ.

ಜಗತ್ತಿನ ಶ್ರೀಮಂತ ನಗರಗಳಾದ ದುಬೈ, ಅಬುಧಾಬಿಗಳಿಂದ ಈಗ ಕೋಟ್ಯಧಿಪತಿಗಳು ತಮ್ಮ ಪ್ರೈವೇಟ್ ಜೆಟ್‌ಗಳಲ್ಲಿ ಕಾಲು ಕೀಳುತ್ತಿದ್ದಾರೆ. ಒಂದು ಜೆಟ್ ಬುಕ್ ಮಾಡಲು ಬರೋಬ್ಬರಿ 3.5 ಲಕ್ಷ ಡಾಲರ್ (ಸುಮಾರು 3 ಕೋಟಿ ರೂಪಾಯಿ!) ಸುರಿಯುತ್ತಿದ್ದಾರೆ.
ಇರಾನ್ ಅಧ್ಯಕ್ಷರು ಕ್ಷಮೆ ಕೇಳಿದರೂ ಟ್ರಂಪ್ ಮಾತ್ರ ‘ಸರೆಂಡರ್’ ಆಗಲೇಬೇಕು ಅಂತ ಹಠ ಹಿಡಿದಿದ್ದಾರೆ. ಈ ಇಬ್ಬರ ಮೊಂಡಾಟದ ಮಧ್ಯೆ ಇಡೀ ಜಗತ್ತು ಪೆಟ್ರೋಲ್ ಬೆಲೆ ಏರಿಕೆ ಮತ್ತು ಯುದ್ಧದ ಭೀತಿಯಲ್ಲಿದೆ.
