ಮಂಗಳೂರು: ತುಳುನಾಡು ಪ್ರೀಮಿಯರ್ ಲೀಗ್ (ಟಿಎನ್‌ಪಿಎಲ್(TNPL)) – ಸೀಸನ್ 1 ಓಪನ್ ರಾಜ್ಯ ಆಮಂತ್ರಣ ಬ್ಯಾಡ್ಮಿಂಟನ್ ಲೀಗ್ ಆಗಿದ್ದು, ಜನವರಿ 24 ಮತ್ತು 25ರಂದು ಮಂಗಳೂರಿನ ಉರ್ವಾ ಇಂಡೋರ್ ಬ್ಯಾಡ್ಮಿಂಟನ್ ಸ್ಟೇಡಿಯಂನಲ್ಲಿ ಆಯೋಜಿಸಲಾಗುತ್ತದೆ. ಈ ಲೀಗ್‌ನಲ್ಲಿ ಭಾರತದ ವಿವಿಧ ಭಾಗಗಳಿಂದ 10 ಫ್ರಾಂಚೈಸ್ ತಂಡಗಳು ಭಾಗವಹಿಸಲಿದ್ದು, ಏಳು ಸ್ಪರ್ಧಾತ್ಮಕ ವಿಭಾಗಗಳಲ್ಲಿ ಪಂದ್ಯಗಳು ನಡೆಯಲಿವೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳನ್ನು ಹಾಗೂ ಭಾರತವನ್ನು ಪ್ರತಿನಿಧಿಸಿದ ವೃತ್ತಿಪರ ಬ್ಯಾಡ್ಮಿಂಟನ್ ಆಟಗಾರರು ಈ ಲೀಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು TNPL ಸ್ಥಾಪಕ ಹಾಗೂ ಮಾಲೀಕ D.S. ಅಬ್ದುಲ್ ರಹಿಮಾನ್ ಹೇಳಿದರು.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೀಗ್‌ಗೆ 250ಕ್ಕೂ ಹೆಚ್ಚು ಆಟಗಾರರಿಂದ ನೋಂದಣಿಗಳು ಲಭಿಸಿದ್ದು, ಜನವರಿ 11 ರಂದು ನಡೆದ ಅಧಿಕೃತ ಪ್ಲೇಯರ್ ಔಕ್ಷನ್ ಬಳಿಕ 180 ಆಟಗಾರರನ್ನು ಆಯ್ಕೆ ಮಾಡಿ 10 ಫ್ರಾಂಚೈಸ್ ತಂಡಗಳಲ್ಲಿ ಸೇರಿಸಲಾಗಿದೆ. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಯೋನೇಕ್ಸ್ AS-50 ಫೆದರ್ ಶಟಲ್‌ಗಳನ್ನು ಬಳಸಿ, ಅಂತರರಾಷ್ಟ್ರೀಯ ನಿಯಮಾವಳಿಗಳಂತೆ ಲೀಗ್ ನಡೆಸಲಾಗುತ್ತದೆ. ಎಲ್ಲಾ ಪಂದ್ಯಗಳು ಲೈವ್ ಟೆಲಿಕಾಸ್ಟ್ ಆಗಲಿದ್ದು, ಆಟಗಾರರು ಮತ್ತು ಫ್ರಾಂಚೈಸ್‌ಗಳಿಗೆ ವ್ಯಾಪಕ ಪ್ರಚಾರ ಸಿಗಲಿದೆ ಎಂದು ತಿಳಿಸಿದರು.

ಸಹ-ಸ್ಥಾಪಕ ಹಾಗೂ ಸಹ-ಮಾಲೀಕ ಪುಣೀತ್ ಪಿ. ಮಾತನಾಡಿ, ವಿಜೇತ ತಂಡಕ್ಕೆ ₹4 ಲಕ್ಷ, ರನ್ನರ್ಸ್ ಅಪ್ ತಂಡಕ್ಕೆ ₹2 ಲಕ್ಷ ಬಹುಮಾನ ಮೊತ್ತ ನಿಗದಿಪಡಿಸಲಾಗಿದೆ. TNPL ಒಂದು ಲಾಭೋದ್ದೇಶಿತ ಕಾರ್ಯಕ್ರಮವಲ್ಲ; ಇದು ಸಂಪೂರ್ಣವಾಗಿ ಬ್ಯಾಡ್ಮಿಂಟನ್ ಆಟಗಾರರು ಹಾಗೂ ಅಭಿಮಾನಿಗಳ ಅಭಿವೃದ್ಧಿಗೆ ಸಮರ್ಪಿತವಾಗಿದೆ. ಸ್ಥಳೀಯ ಮಂಗಳೂರು ಹಾಗೂ ಕರಾವಳಿ ಕರ್ನಾಟಕದ ಆಟಗಾರರಿಗೆ ವೃತ್ತಿಪರ ಲೀಗ್ ವೇದಿಕೆ ಒದಗಿಸಿ, ರಾಷ್ಟ್ರಮಟ್ಟದ ಆಟಗಾರರೊಂದಿಗೆ ಸ್ಪರ್ಧಿಸುವ ಅವಕಾಶ ಕಲ್ಪಿಸುವ ಮೂಲಕ ಅವರ ಅನುಭವ, ಆತ್ಮವಿಶ್ವಾಸ ಮತ್ತು ಪ್ರೇರಣೆಯನ್ನು ಹೆಚ್ಚಿಸುವುದೇ ಲೀಗ್‌ನ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನ EC ಸದಸ್ಯ ಮತ್ತು ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಮಾತನಾಡಿ, ಲೀಗ್‌ನ ಉದ್ದೇಶ, ರೂಪುರೇಷೆ ಹಾಗೂ ವಿಶೇಷತೆಗಳ ಬಗ್ಗೆ ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಅಸೋಸಿಯೇಷನ್, ಅದರ ಕಾರ್ಯದರ್ಶಿ ಸೂಪ್ರಿತ್ ಆಳ್ವಾ, ಹಾಗೂ ದೀಕ್ಷಿತ್ ಕೆ. (ಸುಜಾತಾ ಕಾಂಸ್ಟ್ರಕ್ಷನ್ಸ್, ಮಂಗಳೂರು) ಉಪಸ್ಥಿತರಿದ್ದರು.