ಕೋಝಿಕ್ಕೋಡ್ (ಕೇರಳ):ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಬೇಕೆಂಬ ಹಠದಿಂದ ಮಹಿಳೆಯೊಬ್ಬರು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯ ಹತ್ತಿರ ಉದ್ದೇಶಪೂರ್ವಕವಾಗಿ ಸ್ಪರ್ಶವಾಗುವಂತೆ ನಡೆದು, ಆ ದೃಶ್ಯವನ್ನು ವೀಡಿಯೋವಾಗಿ ದಾಖಲಿಸಿಕೊಂಡ ಘಟನೆ ಭೀಕರ ದುರಂತಕ್ಕೆ ಕಾರಣವಾಗಿದೆ.

ಆ ವೀಡಿಯೋವನ್ನು “ಲೈಂಗಿಕ ಕಿರುಕುಳ” ಎಂಬ ಆರೋಪದೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಲಾಗಿದ್ದು, ಸಾರ್ವಜನಿಕ ಅವಮಾನ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾದ ವ್ಯಕ್ತಿಯೊಬ್ಬರು ಮನನೊಂದ ಸ್ಥಿತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋಳಿಕ್ಕೋಡ್‌ನ ಗೋವಿಂದಪುರಂ ನಿವಾಸಿ ದೀಪಕ್ ಯು. ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಬೆಳಿಗ್ಗೆ 7 ಗಂಟೆಯಾದರೂ ಈತ ಏಳದಿದ್ದಾಗ ಪೋಷರು ಕೋಣೆಯಲ್ಲಿ ಬಂದು ನೋಡಿದಾ ದೀಪಕ್ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ.
ಕೆಲವು ದಿನಗಳ ಹಿಂದೆ ವಿಡಿಯೋ ವೈರಲ್ ಆಗಿತ್ತು. ಪಯ್ಯನ್ನೂರು ರೈಲ್ವೆ ನಿಲ್ದಾಣದಿಂದ ಬಸ್ ನಿಲ್ದಾಣಕ್ಕೆ ಜನದಟ್ಟಣೆಯ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಮಹಿಳೆ ಆತ ತನ್ನನ್ನು ಹಲವು ಬಾರಿ ಅನುಚಿತವಾಗಿ ಮುಟ್ಟಿದ್ದಾಳೆ ಎಂದು ಹೇಳಿಕೊಂಡಿದ್ದಳು. ವಿಡಿಯೋ ವೈರಲ್ ಆಗಿದ್ದು, ವ್ಯಕ್ತಿಯನ್ನು ತೀವ್ರವಾಗಿ ನಿಂದಿಸಲಾಗಿತ್ತು. ಇದರಿಂದ ಆತ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಎನ್ನಲಾಗಿದೆ.

ಈ ನಡುವೆ ಮಹಿಳೆಯೇ ವ್ಯಕ್ತಿಯ ಹತ್ತಿರ ಹೋಗಿ, ಬಸ್ ಚಲಿಸುವಾಗ ಸ್ಪರ್ಶವಾಗುವಂತೆ ಮಾಡಿ, ಅದರ ವಿಡಿಯೋ ರೆಕಾರ್ಡ್ ಮಾಡಿದ್ದಾಳೆಂಬ ಮಾತುಗಳು ಕೇಳಿಬರುತ್ತಿದ್ದು, ಈ ಕುರಿತ ಕೆಲ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವ್ಯಕ್ತಿಯ ಕುಟುಂಬಸ್ಥರೂ ಕೂಡ ತಮ್ಮ ಮಗ ಅಮಾಯಕ. ವೈರಲ್ ಆಗಬೇಕೆಂದು ಈ ರೀತಿ ಮಾಡಿದ್ದಾರೆಂದು ಆರೋಪ ಮಾಡಿದ್ದಾರೆ. ಇದೀಗ ಮಹಿಳೆಯ ಕುರಿತಂತೆಯೂ ಟೀಕೆಗಳು ವ್ಯಕ್ತವಾಗುತ್ತಿದೆ. ಪ್ರಕರಣ ಸಂಬಂಧ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯಿಂದ ಸತ್ಯಾಸತ್ಯತೆಗಳು ಹೊರಬರಬೇಕಿದೆ.