ಮಂಗಳೂರು: ಉಳ್ಳಾಲದ ಮಸೀದಿ ಬಳಿ ಬಾಂಬ್ ಸ್ಫೋಟಿಸುವುದಾಗಿ ಫೇಸ್‌ಬುಕ್‌ನಲ್ಲಿ ಕಮೆಂಟ್ ಮಾಡಿ ದ್ವೇಷ ಹರಡಿದ್ದ ವ್ಯಕ್ತಿಯನ್ನು ಬಂಧಿಸಿದ ಬೆನ್ನಲ್ಲೇ, ಈ ಪ್ರಕರಣಕ್ಕೆ ಯುಎಪಿಎ (UAPA) ಕಾಯ್ದೆ ದಾಖಲಿಸದೇ ಇರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾದ ಟೀಕೆಗಳಿಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಸುದೀರ್ಘ ಸ್ಪಷ್ಟೀಕರಣ ನೀಡಿದ್ದಾರೆ. ಪೊಲೀಸ್ ಇಲಾಖೆಯು ಕೇವಲ ಸತ್ಯ ಮತ್ತು ಸಾಕ್ಷ್ಯಾಧಾರಗಳ ಮೇಲೆ ಮಾತ್ರ ಕಾರ್ಯನಿರ್ವಹಿಸುತ್ತದೆ ಎಂದು ಅವರು ಪುನರುಚ್ಚರಿಸಿದ್ದಾರೆ.

ಮೊಹಮ್ಮದ್ ರಿಯಾಜ್ ಕಡಂಬು ಎಂಬ ಹೆಸರಿನ ವ್ಯಕ್ತಿಯ ಫೇಸ್‌ಬುಕ್ ಪೋಸ್ಟ್‌ನಲ್ಲಿ, “ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕುವುದು ದೇಶದ್ರೋಹದ ಕೃತ್ಯವಲ್ಲವೇ? ಯುಎಪಿಎ (UAPA) ಅಡಿಯಲ್ಲಿ ಕೇಸು ದಾಖಲಿಸಬೇಕಾದ ಕೃತ್ಯವಲ್ಲವೇ? ಯುಎಪಿಎ ಧರ್ಮ ನೋಡಿಯಲ್ಲ, ಅಪರಾಧ ನೋಡಿ ಹಾಕುವುದೆಂದು ಭಾವಿಸುತ್ತೇನೆ!” ಎಂದು ಪ್ರಶ್ನಿಸಿ ಪೋಸ್ಟ್ ಮಾಡಿದ್ದರು.
ಕಮಿಷನರ್ ಖಡಕ್ ಉತ್ತರ
ಈ ಕುರಿತು ಪ್ರತಿಕ್ರಿಯಿಸಿರುವ ಕಮಿಷನರ್, ನಿನ್ನೆಯ ಪ್ರಕರಣದಲ್ಲಿ ಯುಎಪಿಎ ಕಾಯ್ದೆಯ ನಿಬಂಧನೆಗಳನ್ನು ಅನ್ವಯಿಸಲು ಬೇಕಾದ ಯಾವುದೇ ಪೂರಕ ಸಾಕ್ಷ್ಯಗಳು ಕಂಡುಬಂದಿಲ್ಲವಾದ್ದರಿಂದ ಆ ಕಾಯ್ದೆಯನ್ನು ಬಳಸಲಾಗಿಲ್ಲ ಎಂದು ತಿಳಿಸಿದ್ದಾರೆ. ಒಂದು ವೇಳೆ ನಂಬಲರ್ಹವಾದ ಪುರಾವೆಗಳು ಲಭ್ಯವಾದರೆ, ಯಾವುದೇ ವ್ಯಕ್ತಿಯ ವಿರುದ್ಧ ಯುಎಪಿಎ ಅಥವಾ ಸಂಬಂಧಿತ ಕಾನೂನು ಕ್ರಮ ಜರುಗಿಸಲು ಇಲಾಖೆ ಹಿಂಜರಿಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಆರೋಪಗಳನ್ನು ಮಾಡುವವರಿಗೆ ತಮ್ಮ ವಾದದ ಬಗ್ಗೆ ದೃಢ ನಂಬಿಕೆಯಿದ್ದರೆ, ಅವರು ನೇರವಾಗಿ ನ್ಯಾಯಾಲಯವನ್ನು ಸಂಪರ್ಕಿಸಿ ತಮ್ಮಲ್ಲಿರುವ ದಾಖಲೆಗಳನ್ನು ಸಲ್ಲಿಸಲು ಸ್ವತಂತ್ರರಿದ್ದಾರೆ. ಅದನ್ನು ಬಿಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಬೇಜವಾಬ್ದಾರಿಯುತ ಮತ್ತು ಪ್ರಚೋದನಾಕಾರಿ ಹೇಳಿಕೆ ನೀಡುವುದು, ವಿಷಯಕ್ಕೆ ಕೋಮು ಬಣ್ಣ ಬಳಿಯುವುದು ಅಥವಾ ಮುಗ್ಧ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುವುದು ಖಂಡನೀಯ ಎಂದು ಕಮಿಷನರ್ ಎಚ್ಚರಿಸಿದ್ದಾರೆ.

ಪೊಲೀಸ್ ತನಿಖೆಯು ಊಹಾಪೋಹಗಳ ಅಥವಾ ಸಾಮಾಜಿಕ ಜಾಲತಾಣಗಳ ನಿರೂಪಣೆಗಳ (Narratives) ಆಧಾರದ ಮೇಲೆ ನಡೆಯುವುದಿಲ್ಲ. ಇಲಾಖೆಯು ಕಟ್ಟುನಿಟ್ಟಾಗಿ ಪುರಾವೆಗಳ ಆಧಾರದ ಮೇಲೆ ಮತ್ತು ಕಾನೂನಿನ ಚೌಕಟ್ಟಿನಲ್ಲೇ ತನಿಖೆಯನ್ನು ಮುಂದುವರಿಸಲಿದೆ. ಬಾಕಿ ಇರುವ ಎಲ್ಲಾ ಯುಎಪಿಎ ಪ್ರಕರಣಗಳನ್ನು ಇಲಾಖೆಯು ಗಂಭೀರವಾಗಿ ಬೆನ್ನಟ್ಟಲಿದ್ದು, ಕಾನೂನು ತನ್ನ ಕ್ರಮವನ್ನು ಕೈಗೊಳ್ಳಲಿದೆ ಎಂದು ಅವರು ಭರವಸೆ ನೀಡಿದ್ದಾರೆ.
“ಸಾಕ್ಷ್ಯ ಸಂಗ್ರಹಿಸಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವುದು ನಮ್ಮ ಕೆಲಸ, ಅದನ್ನು ನಾವು ಯಾವಾಗಲೂ ಮಾಡುತ್ತೇವೆ” ಎಂದು ಕಮಿಷನರ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
