ಮಂಗಳೂರು: ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ದೇಶಾದ್ಯಂತ ಸಂಚರಿಸುತ್ತಿರುವ ʻಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ’ ರಥಯಾತ್ರೆಯು ಮಾರ್ಚ್ 7ರಂದು ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸಲಿದ್ದು, ಮಾ. 12 ಮತ್ತು 13ರಂದು ಮಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ಶ್ರೀ ಸತ್ಯಸಾಯಿ ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ತೆಲಂಗಾಣದ ಮೂಲಕ ಕರ್ನಾಟಕವನ್ನು ಪ್ರವೇಶಿಸಿರುವ ಈ ರಥವು ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿದೆ. ಮಾ. 7ರಂದು ಬೆಳಿಗ್ಗೆ 10 ಗಂಟೆಗೆ ಗುಂಡ್ಯದ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸಲಿದ್ದು, ಸುಳ್ಯ, ಬೆಳ್ತಂಗಡಿ, ಧರ್ಮಸ್ಥಳ, ಪುತ್ತೂರು, ಬಂಟ್ವಾಳ ಮತ್ತು ವಿಟ್ಲದ ಮೂಲಕ ಸಂಚರಿಸಲಿದೆ. ಮಾ. 12ರಂದು ಬೆಳಿಗ್ಗೆ ತಲಪಾಡಿಯಲ್ಲಿ ರಥವನ್ನು ಸ್ವಾಗತಿಸಲಾಗುವುದು.

ಮಂಗಳೂರಿನಲ್ಲಿ ವಿಶೇಷ ಕಾರ್ಯಕ್ರಮಗಳು
ಮಾ. 12: ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮಣ್ಣಗುಡ್ಡದ ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ರಥದ ದಿವ್ಯ ದರ್ಶನ ಹಾಗೂ ಪಾದುಕಾ ಸ್ಪರ್ಶಕ್ಕೆ ಅವಕಾಶವಿರಲಿದೆ.
ಮಾ. 13: ಬೆಳಿಗ್ಗೆ 8 ಗಂಟೆಗೆ ಜ್ಯೋತಿ ವೃತ್ತದಿಂದ ಕುದ್ರೋಳಿ ರಂಗರಾವ್ ಪುರಭವನದವರೆಗೆ ಅದ್ಧೂರಿ ಮೆರವಣಿಗೆ ನಡೆಯಲಿದೆ. ಪುರಭವನದಲ್ಲಿ ಬೆಳಿಗ್ಗೆ 10ರಿಂದ ಸಂಜೆ 7ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಸತ್ಸಂಗ ಮತ್ತು ಭಜನೆಗಳು ನಡೆಯಲಿವೆ.
ಸೇವಾ ಕಾರ್ಯಗಳು: ಕಾರ್ಯಕ್ರಮದ ಅಂಗವಾಗಿ ಅರ್ಹ 22 ಫಲಾನುಭವಿಗಳಿಗೆ ಕೃತಕ ಕಾಲು ಹಾಗೂ ಇಬ್ಬರಿಗೆ ವೀಲ್ ಚೇರ್ ವಿತರಣೆ ಮಾಡಲಾಗುವುದು. ಯೆನೆಪೋಯ ದಂತ ಮಹಾವಿದ್ಯಾಲಯದ ವತಿಯಿಂದ ಉಚಿತ ದಂತ ತಪಾಸಣೆ ಮತ್ತು ಕೆಎಂಸಿ ವತಿಯಿಂದ ನೇತ್ರ ತಪಾಸಣಾ ಶಿಬಿರ ಆಯೋಜಿಸಲಾಗಿದೆ.

ಯಕ್ಷಗಾನ ಮತ್ತು ಸಂಗೀತ ವೈಭವ
ಪುರಭವನದ ಕಾರ್ಯಕ್ರಮದಲ್ಲಿ ಪ್ರಸಿದ್ಧ ಭಾಗವತರಾದ ಶ್ರೀ ಗಿರೀಶ್ ರೈ ಕಕ್ಕೆಪದವು ಮತ್ತು ಶ್ರೀಮತಿ ಕಾವ್ಯಶ್ರೀ ಆಜೇರು ಅವರಿಂದ ಯಕ್ಷಗಾನ ವೈಭವ ಹಾಗೂ ಶ್ರೀ ಅಂಕುಶ್ ನಾಯಕ್ ಅವರಿಂದ ಸಿತಾರ್ ವಾದನ ನಡೆಯಲಿದೆ. ಮಾ. 14ರಂದು ರಥವು ಸುರತ್ಕಲ್, ಮುಲ್ಕಿ ಮತ್ತು ಬಪ್ಪನಾಡು ದೇವಸ್ಥಾನದ ಮೂಲಕ ಉಡುಪಿ ಜಿಲ್ಲೆಗೆ ತೆರಳಲಿದೆ.
ಈ ಕಾರ್ಯಕ್ರಮಗಳಲ್ಲಿ ರಾಜ್ಯಧ್ಯಾಕ್ಷರಾದ ಪದ್ಮನಾಭ ಪೈ, ಚಂದ್ರಶೇಖರ ನಾಯಕ್, ನಿರಂಜನ್ ಹೆಬ್ಬಾರ್, ದೇವಾನಂದ ರೈ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ.