ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಇಸ್ರೇಲ್-ಇರಾನ್ ಯುದ್ಧವು ಆರನೇ ದಿನಕ್ಕೆ ಕಾಲಿಟ್ಟು ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವ ಬೆನ್ನಲ್ಲೇ, ಅಮೆರಿಕ ತನ್ನ ಅತ್ಯಂತ ವಿನಾಶಕಾರಿ ಅಣ್ವಸ್ತ್ರ ಸಾಮರ್ಥ್ಯದ ʻಮಿನುಟ್‌ಮ್ಯಾನ್ III’ ಖಂಡಾಂತರ ಕ್ಷಿಪಣಿಯನ್ನು (ICBM) ಯಶಸ್ವಿಯಾಗಿ ಪರೀಕ್ಷಿಸಿದೆ. ಈ ಪರೀಕ್ಷೆಯು ಇಡೀ ಜಗತ್ತಿನ ಗಮನ ಸೆಳೆದಿದ್ದು, ವಿಶೇಷವಾಗಿ ಇರಾನ್‌ಗೆ ಪರೋಕ್ಷ ಎಚ್ಚರಿಕೆ ಎಂಬಂತೆ ವಿಶ್ಲೇಷಿಸಲಾಗುತ್ತಿದೆ.

ಈ ಕ್ಷಿಪಣಿಯನ್ನು ‘ಡೂಮ್ಸ್‌ಡೇ ಮಿಸೈಲ್’ ಎಂದು ಕರೆಯಲು ಬಲವಾದ ಕಾರಣವಿದೆ. ಇದು ಹೊತ್ತೊಯ್ಯಬಲ್ಲ ಅಣ್ವಸ್ತ್ರಗಳು 1945ರಲ್ಲಿ ಜಪಾನ್‌ನ ಹಿರೋಷಿಮಾ ಮೇಲೆ ಹಾಕಲಾಗಿದ್ದ ಅಣುಬಾಂಬ್‌ಗಿಂತ ಸುಮಾರು 20 ಪಟ್ಟು ಹೆಚ್ಚು ಶಕ್ತಿಶಾಲಿ ಮತ್ತು ವಿನಾಶಕಾರಿ ಆಗಿವೆ. ಕ್ಯಾಲಿಫೋರ್ನಿಯಾದ ವಾಂಡೆನ್‌ಬರ್ಗ್ ಸ್ಪೇಸ್ ಫೋರ್ಸ್ ಬೇಸ್‌ನಿಂದ ಮಾರ್ಚ್ 3ರಂದು ರಾತ್ರಿ 11:01ಕ್ಕೆ ಈ ಪರೀಕ್ಷಾರ್ಥ ಉಡಾವಣೆ ನಡೆಸಲಾಯಿತು.

ಈ ಕ್ಷಿಪಣಿಯು ಹಗುರವಾದ ಎರಡು ʻಟೆಸ್ಟ್ ರೀ-ಎಂಟ್ರಿ ವೆಹಿಕಲ್’ಗಳನ್ನು ಹೊತ್ತು ಸಾಗುವ ಮೂಲಕ ತನ್ನ ನಿಖರತೆಯನ್ನು ಸಾಬೀತುಪಡಿಸಿದೆ. ಅಮೆರಿಕ ಬಾಹ್ಯಾಕಾಶ ಪಡೆಯ ಪ್ರಕಾರ, ಈ ಪರೀಕ್ಷೆಯು ಯಾವುದೇ ಪ್ರಚಲಿತ ವಿಶ್ವ ವಿದ್ಯಮಾನಗಳಿಗೆ (ಯುದ್ಧಕ್ಕೆ) ಪ್ರತಿಕ್ರಿಯೆಯಲ್ಲ, ಬದಲಿಗೆ ದಶಕಗಳಿಂದ ನಡೆಯುತ್ತಿರುವ ವಾಡಿಕೆಯ ಕಾರ್ಯಕ್ರಮದ ಭಾಗವಾಗಿದೆ. ಈವರೆಗೆ ಇಂತಹ 300ಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗಿದೆ.

“ನಮ್ಮ ಐಸಿಬಿಎಂ (ICBM) ಪಡೆಯ ಎಲ್ಲಾ ಆಯಾಮಗಳನ್ನು ಪರೀಕ್ಷಿಸುವುದು ಅತ್ಯಗತ್ಯ. ಇದು ಅತ್ಯಂತ ನಿಖರತೆಯೊಂದಿಗೆ ಹಲವು ಗುರಿಗಳನ್ನು ಏಕಕಾಲದಲ್ಲಿ ಧ್ವಂಸ ಮಾಡುವ ನಮ್ಮ ಸಾಮರ್ಥ್ಯವನ್ನು ದೃಢೀಕರಿಸುತ್ತದೆ” ಎಂದು ಅಮೆರಿಕದ ಏರ್ ಫೋರ್ಸ್ ಗ್ಲೋಬಲ್ ಸ್ಟ್ರೈಕ್ ಕಮಾಂಡ್‌ನ ಜನರಲ್ ಎಸ್.ಎಲ್. ಡೇವಿಸ್ ತಿಳಿಸಿದ್ದಾರೆ.
ಯುದ್ಧದ ಈ ಸಂಕಷ್ಟದ ಸಮಯದಲ್ಲಿ ಇಂತಹ ಬೃಹತ್ ಅಣ್ವಸ್ತ್ರ ಕ್ಷಿಪಣಿಯ ಪರೀಕ್ಷೆಯು, ಅಮೆರಿಕ ತನ್ನ ಮಿಲಿಟರಿ ಶಕ್ತಿಯನ್ನು ಪ್ರದರ್ಶಿಸುವ ಮೂಲಕ ಶತ್ರು ರಾಷ್ಟ್ರಗಳಿಗೆ ನಡುಕ ಹುಟ್ಟಿಸಿರುವುದಂತೂ ಸುಳ್ಳಲ್ಲ.