ಕಾಸರಗೋಡು: ಕುಂಬಡಾಜೆ ಪಂಚಾಯತ್ ವ್ಯಾಪ್ತಿಯಲ್ಲಿ 72 ವರ್ಷದ ವೃದ್ಧೆ ಪುಷ್ಪಲತಾ ವಿ. ಶೆಟ್ಟಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬದಿಯಡ್ಕ ಪೊಲೀಸರು ಶುಕ್ರವಾರ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಶವಪರೀಕ್ಷೆಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಿರುವುದು ದೃಢಪಟ್ಟ ಕೆಲವೇ ಗಂಟೆಗಳಲ್ಲಿ ಈ ಬಂಧನ ನಡೆದಿದೆ.

ಬಂಧಿತನನ್ನು ಪಕ್ಕದ ಬದಿಯಡ್ಕ ಪಂಚಾಯತ್‌ನ ಪೆರ್ಡಾಲ ನಿವಾಸಿ ಪರಮೇಶ್ವರ ಅಲಿಯಾಸ್ ರಮೇಶ್ ನಾಯ್ಕ್ (47) ಎಂದು ಗುರುತಿಸಲಾಗಿದೆ. ಆತ ಹುಲ್ಲು ಕತ್ತರಿಸುವ ಕೆಲಸ ಮಾಡುತ್ತಿದ್ದನು.
ಬದಿಯಡ್ಕ ಪೊಲೀಸ್ ಇನ್ಸ್‌ಪೆಕ್ಟರ್ ಎ. ಸಂತೋಷ್ ಕುಮಾರ್ ಅವರ ನೇತೃತ್ವದಲ್ಲಿ ತನಿಖೆ ಆರಂಭವಾಗಿದ್ದು, ಅಪರಾಧ ನಡೆದ ದಿನ ಆ ಪ್ರದೇಶದಲ್ಲಿ ಸಂಚರಿಸಿದ್ದವರ ಕುರಿತು ನಿವಾಸಿಗಳಿಂದ ಮಾಹಿತಿ ಸಂಗ್ರಹಿಸಲಾಯಿತು. ಆಗ ಹಲವು ಮಂದಿಯ ಜೊತೆ ರಮೇಶ್ ನಾಯ್ಕ್ ಆ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದನು ಎಂದು ಸ್ಥಳೀಯರು ತಿಳಿಸಿದ್ದರು. ಆತನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾ ಆತನ ಹೇಳಿಕೆಗಳಲ್ಲಿ ವೈರುಧ್ಯ ಕಂಡುಬಂದಿತು.

ಆರೋಪಿಯ ದೇಹದಲ್ಲಿ ಗೀರು ಗುರುತುಗಳು, ಉಗುರಿನ ಗಾಯಗಳು ಹಾಗೂ ಬಲ ಅಂಗೈ ಒಳಭಾಗದಲ್ಲಿ ಕಚ್ಚಿದ ಗುರುತುಗಳು ಕಂಡುಬಂದವು. ಆರಂಭದಲ್ಲಿ ಮೆಣಸು ಕೀಳುವಾಗ ಗಾಯಗಳಾಗಿವೆ ಎಂದು ಹೇಳಿಕೊಂಡಿದ್ದರೂ, ನಂತರ ವಿಚಾರಣೆ ವೇಳೆ ಆತ ತಪ್ಪೊಪ್ಪಿಕೊಂಡಿದ್ದಾನೆ.

ಪೊಲೀಸರ ಪ್ರಕಾರ, ಪುಷ್ಪಲತಾ ಶೆಟ್ಟಿ ಅವರ ಚಿನ್ನದ ಮಂಗಳಸೂತ್ರವನ್ನು ಕಸಿದುಕೊಳ್ಳಲು ಪ್ರಯತ್ನಿಸಿದಾಗ ಅವರು ವಿರೋಧ ವ್ಯಕ್ತಪಡಿಸಿದ್ದರಿಂದ, ಆರೋಪಿಯು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಶವದ ಮೇಲೆ ಉಗುರು ಹಾಗೂ ರಕ್ತದ ಕಲೆಗಳು ಕಂಡುಬಂದಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ಹಲ್ಲುಗಳ ಮೇಲೂ ರಕ್ತದ ಗುರುತುಗಳು ಪತ್ತೆಯಾಗಿದೆ.
ಪುಷ್ಪಲತಾ ಶೆಟ್ಟಿ ಅವರು ಕುಂಬಡಾಜೆ ಪಂಚಾಯತ್‌ನ ಮೊವ್ವರ್ ಗ್ರಾಮದ ಅಜಿಲದಲ್ಲಿರುವ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಬುಧವಾರ ಬೆಳಿಗ್ಗೆ ಅವರು ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಶುಕ್ರವಾರ ಕಣ್ಣೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆಯಲ್ಲಿ ಕೈಯಿಂದ ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ದೃಢಪಟ್ಟಿದೆ.
ಸುಮಾರು 28 ಗ್ರಾಂ ತೂಕದ ಮಂಗಳಸೂತ್ರವನ್ನು ಕಸಿದುಕೊಳ್ಳಲು ಯತ್ನ ನಡೆದಿದ್ದು, ಮನೆಯಲ್ಲಿ ಚಿನ್ನದ ಬಳೆಗಳು ಹಾಗೂ ನಗದನ್ನು ಹಂತಕ ಮುಟ್ಟಲಿಲ್ಲ. ವೃದ್ಧೆ ಅಸುನೀಗುತ್ತಿದ್ದಂತೆ ಆತ ಭಯದಿಂದ ಮನೆ ಪರಿಶೀಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕದ್ದ ಸರವನ್ನು ಆತ ಅಡಗಿಸಿಟ್ಟಿದ್ದಾಗು ರೋಪಿಯು ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಶನಿವಾರ ಸಾಕ್ಷ್ಯ ಸಂಗ್ರಹದ ಭಾಗವಾಗಿ ಅದನ್ನು ವಶಪಡಿಸಿಕೊಳ್ಳಲಾಗುವುದು. ಆರೋಪಿಗೆ ಸುಮಾರು ₹8 ಲಕ್ಷ ಸಾಲವಿದ್ದು, ಆರ್ಥಿಕ ಒತ್ತಡವೇ ಅಪರಾಧಕ್ಕೆ ಕಾರಣ ಎನ್ನಲಾಗಿದೆ. ಇದು ಆತನ ಮೊದಲ ಅಪರಾಧ ಎಂದು ಪೊಲೀಸರು ಹೇಳಿದ್ದಾರೆ. ತನಿಖೆಯ ಭಾಗವಾಗಿ ವಿಧಿವಿಜ್ಞಾನ ತಜ್ಞರೂ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಪುಷ್ಪಲತಾ ಶೆಟ್ಟಿ ಅವರ ಪತಿ ವೆಂಕಪ್ಪ ಶೆಟ್ಟಿ ಅವರು ಈಗಾಗಲೇ ನಿಧನರಾಗಿದ್ದು, ದಂಪತಿಗೆ ಮಕ್ಕಳಿರಲಿಲ್ಲ. ಅವರು ಒಂಟಿಯಾಗಿ ವಾಸಿಸುತ್ತಿದ್ದರೂ ಸಂಬಂಧಿಕರು ಫೋನ್ ಮೂಲಕ ಸಂಪರ್ಕದಲ್ಲಿದ್ದರು.