ಮಂಗಳೂರು: ಅಭಿವೃದ್ಧಿ ಕಾಮಗಾರಿಗಳ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಅನುಸರಿಸುತ್ತಿರುವ “ಕ್ರೆಡಿಟ್ ರಾಜಕಾರಣ” ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯವೈಖರಿಯನ್ನು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ದಾಖಲೆ ಸಮೇತ ತರಾಟೆಗೆ ತೆಗೆದುಕೊಂಡಿದ್ದಾರೆ.

ಮಂಗಳೂರಿನಲ್ಲಿ ಅಟಲ್ ಸೇವಾ ಕೇಂದ್ರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರು ಅಥವಾ ಗೆಸ್ಟ್ ಉಸ್ತುವಾರಿ ಸಚಿವರು ಎರಡು-ಮೂರು ತಿಂಗಳಿಗೊಮ್ಮೆ ಜಿಲ್ಲೆಗೆ ಬರುತ್ತಾರೆಯೇ ಹೊರತು, ಕಳೆದ ಎರಡು ಮುಕ್ಕಾಲು ವರ್ಷಗಳಿಂದ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ ಶಾಸಕರನ್ನು ಕರೆದು ಒಮ್ಮೆಯೂ ಸಭೆ ನಡೆಸುವ ಪ್ರಯತ್ನ ಮಾಡಿಲ್ಲ. ಬದಲಾಗಿ, ಕೇವಲ ತಮ್ಮ ಪಾರ್ಟಿ ನಾಯಕರ ರಾಜಕೀಯಕ್ಕೆ ಸಹಾಯ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ ಶಾಸಕರು, ಕಾಂಗ್ರೆಸ್‌ನವರ ಇಂತಹ ಮಾನಸಿಕತೆ ಬಗ್ಗೆ ಸಾರ್ವಜನಿಕವಾಗಿ ಪ್ರಶ್ನಿಸಿದರು.
ಸುಮಾರು 25 ವರ್ಷಗಳ ಹಿಂದೆ ಅಳವಡಿಸಲಾಗಿದ್ದ ಕೊಡಿಯಾಲ್‌ಗುತ್ತು ವೆಟ್‌ವೆಲ್‌ನಿಂದ ಕುದ್ರೋಳಿ ವೆಟ್‌ವೆಲ್‌ಗೆ ಸಂಪರ್ಕಿಸುವ ಪಂಪಿಂಗ್ ಕೊಳವೆ ಮಾರ್ಗ ಒಡೆದು ಸುತ್ತಮುತ್ತಲಿನ ಪರಿಸರಕ್ಕೆ ಹಾನಿಯಾಗುತ್ತಿತ್ತು. ಈ ಗಂಭೀರ ಸಮಸ್ಯೆಯನ್ನು ಅಂದಿನ ಮೇಯರ್ ಸುಧೀರ್ ಶೆಟ್ಟಿ ಅವರು ನನ್ನ ಗಮನಕ್ಕೆ ತಂದಾಗ, ನಾನು ಮನಪಾ ಕಮೀಷನರ್ ಹಾಗೂ ಕೆಐಡಿಎಫ್‌ಸಿ ಅಧಿಕಾರಿಗಳ ಸಭೆ ನಡೆಸಿ 3.47 ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದೆ. ಜಿಲ್ಲಾಧಿಕಾರಿಗಳು ಅನುದಾನ ನೀಡಲು ಹಿಂದೇಟು ಹಾಕಿದಾಗ, ನಾನು ಮತ್ತು ಸುಧೀರ್ ಶೆಟ್ಟಿಯವರು ಆ ಭಾಗದ 25 ನಿವಾಸಿಗಳನ್ನು ಜಿಲ್ಲಾಧಿಕಾರಿಗಳ ಬಳಿ ಕರೆದೊಯ್ದು ಮನವರಿಕೆ ಮಾಡಿದ ನಂತರವೇ ಯೋಜನೆಗೆ ಅನುಮೋದನೆ ಸಿಕ್ಕಿತ್ತು. ಆದರೆ, ಈಗ ಕಾಮಗಾರಿ ಆರಂಭವಾಗುವ ಹಂತದಲ್ಲಿ ಎಂ.ಎಲ್.ಸಿ ಐವನ್ ಡಿಸೋಜಾ ಮತ್ತು ಕಾಂಗ್ರೆಸ್ ನಾಯಕರು, ಬಿಜೆಪಿಯವರು ಮಾಡಿಸಿದ ಕೆಲಸವನ್ನು ತಾವೇ ಮಾಡಿದ್ದು ಎಂದು ತೋರಿಸಿಕೊಳ್ಳಲು ಮಾಧ್ಯಮಗಳ ಮುಂದೆ ಉಸ್ತುವಾರಿ ಸಚಿವರ ವಿಶೇಷ ಸ್ಥಳ ಭೇಟಿಯ ನಾಟಕವಾಡುತ್ತಿದ್ದಾರೆ. ಯಾರೋ ಮಾಡಿದ ಕೆಲಸಕ್ಕೆ ಅಧಿಪತಿಗಳಾಗುವ ಹಪಾಹಪಿ ಕಾಂಗ್ರೆಸ್‌ನವರಿಗೆ ಏಕಿದೆ ಎಂದು ಅವರು ಪ್ರಶ್ನಿಸಿದರು.

ಅದೇ ರೀತಿ ಎಂ.ಜಿ ರೋಡ್ ಸೇತುವೆ ವಿಚಾರದಲ್ಲೂ ಕಾಂಗ್ರೆಸ್ ನಾಯಕರು ಅಭಿವೃದ್ಧಿಗೆ ಅಡ್ಡಗಾಲು ಹಾಕಿದ್ದಾರೆ ಎಂದು ಶಾಸಕರು ದೂರಿದರು. ನಮ್ಮ ಸರ್ಕಾರದ ಅವಧಿಯಲ್ಲಿ ಸ್ಮಾರ್ಟ್ ಸಿಟಿಯಿಂದ 2 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಶಿಲಾನ್ಯಾಸ ಮಾಡಲಾಗಿತ್ತು. ಆದರೆ ಪೊಲೀಸ್ ಇಲಾಖೆಯ ಅನುಮತಿ ವಿಳಂಬದ ಕಾರಣ ಚುನಾವಣೆ ಘೋಷಣೆಯಾಗಿ ಕೆಲಸ ನಿಂತಾಗ, ಉಸ್ತುವಾರಿ ಸಚಿವರು ಹಾಗೂ ಎಂ.ಎಲ್.ಸಿಗಳು ಈ ಬ್ರಿಡ್ಜ್ ಅವಶ್ಯಕತೆಯೇ ಇಲ್ಲ ಎಂದು ಹೇಳಿ ಅನುದಾನವನ್ನು ಜಿಲ್ಲಾಧಿಕಾರಿ ಕಚೇರಿಗೆ ವರ್ಗಾಯಿಸಿದರು. ನಾವು ಶಿಲಾನ್ಯಾಸ ಮಾಡಿದ್ದ ಕಾಮಗಾರಿಯನ್ನು ಬದಲಾಯಿಸಿರುವುದು ಎಷ್ಟು ಸರಿ? ಸುಧೀರ್ ಮತ್ತು ಪ್ರೇಮಾನಂದ ಶೆಟ್ಟಿ ಅವರು ಮೇಯರ್ ಆಗಿದ್ದಾಗ ಬರೆದ ಪತ್ರಗಳೂ ನನ್ನ ಬಳಿ ಇವೆ. ನಮ್ಮ ಅವಧಿಯಲ್ಲಿ ಅನುಮೋದನೆ ಪಡೆದ ಹೊಸ ಸೇತುವೆಯ ಕಾಮಗಾರಿ ನಡೆಯುವಾಗ, ಈಗ ವೀಕ್ಷಣೆ ಮಾಡಲು ಬರುತ್ತಿರುವ ಕಾಂಗ್ರೆಸ್ ನಾಯಕರ ನಡೆ ಹಾಸ್ಯಾಸ್ಪದ ಎಂದರು.

ಅಲ್ಲದೆ, ಪ್ರಕೃತಿ ವಿಕೋಪದಲ್ಲಿ ತಾಳಿಪಾಡಿ ಉಮೇಶ್ ಶೆಟ್ಟಿ ಅವರ ಮನೆ ಬಿದ್ದಾಗ ಬಿಜೆಪಿ ಶಾಸಕರು ಪ್ರಕ್ರಿಯೆ ಮುಗಿಸಿ ಪರಿಹಾರ ನೀಡಿದ ಆರು ತಿಂಗಳ ಬಳಿಕ, ಈಗ ಫೋಟೋ ತೆಗೆಸಿಕೊಂಡು ನಾವೇ ಮಾಡಿದ್ದು ಎಂದು ಬಿಂಬಿಸುತ್ತಿದ್ದಾರೆ. ಐದು ವರ್ಷಕ್ಕೆ ಶಾಸಕರಿಗೆ 10 ಕೋಟಿ ರೂ. ಶಾಸಕರ ನಿಧಿ ಬರುತ್ತದೆ, ಆ ಹಣ ಎಲ್ಲಿಂದ ಬಂತು ಎಂದು ಕೇಳುವ ಹಕ್ಕು ಇವರಿಗಿಲ್ಲ. ಅಭಿವೃದ್ಧಿಯ ಬಗ್ಗೆ ಕನಿಷ್ಠ ಜ್ಞಾನವಿಲ್ಲದ ಕಾಂಗ್ರೆಸ್ ನಾಯಕರು, ಕೇವಲ ಫೋಟೋಗಾಗಿ ಮತ್ತು ಕ್ರೆಡಿಟ್‌ಗಾಗಿ ರಾಜಕೀಯ ಮಾಡುತ್ತಿದ್ದಾರೆ ಎಂದು ಶಾಸಕ ವೇದವ್ಯಾಸ ಕಾಮತ್ ವಾಗ್ದಾಳಿ ನಡೆಸಿದರು.
ಪತ್ರಿಕಾಗೋಷ್ಠಿಯಲ್ಲಿ ಮೇಯರ್‌ಗಳಾಗಿದ್ದ ಪ್ರೇಮಾನಂದ ಶೆಟ್ಟಿ, ದಿವಾಕರ ಪಾಂಡೇಶ್ವರ, ಸುಧೀರ್ ಶೆಟ್ಟಿ ಕಣ್ಣೂರು, ಮಾಜಿ ಉಪಮೇಯರ್ ಶಕೀಲಾ ಕಾವಾ, ಮನೋಜ್ ಕದ್ರಿ ಹಾಗೂ ಪಕ್ಷದ ಪ್ರಮುಖರಾದ ಲಲ್ಲೇಶ್ ಕುಮಾರ್, ಮೋಹನ್ ಪೂಜಾರಿ, ಪ್ರವೀಣ್ ನಿಡ್ಡೆಲ್ ಮತ್ತು ಅಶ್ವಿತ್ ಕೊಟ್ಟಾರಿ ಮತ್ತಿತರರು ಉಪಸ್ಥಿತರಿದ್ದರು.
