ಜ.17,18: ಉಡುಪಿಯ ಹಲವೆಡೆ ಮದ್ಯ ಮಾರಾಟ ಬಂದ್!!

ಉಡುಪಿ: ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನಡೆಯಲಿರುವ ಶೀರೂರು ಮಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪರ್ಯಾಯೋತ್ಸವದ ಪ್ರಯುಕ್ತ ಜಿಲ್ಲಾಡಳಿತವು ಉಡುಪಿ ನಗರ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಜ.17ರ ಬೆಳಿಗ್ಗೆ 10:00 ಗಂಟೆಯಿಂದ ಜ.18ರ ಸಂಜೆ 06:00 ಗಂಟೆಯವರೆಗೆ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ. ಸ್ವರೂಪ ಟಿ.ಕೆ. ಅವರು ಆದೇಶ ನೀಡಿದ್ದಾರೆ.\

ಜನವರಿ 17 ಮತ್ತು 18 ರಂದು ಪರ್ಯಾಯೋತ್ಸವ ನಡೆಯಲಿದ್ದು, ಈ ಸಂದರ್ಭದಲ್ಲಿ ದೇಶದ ವಿವಿಧೆಡೆಯಿಂದ ಗಣ್ಯರು, ಮಠಾಧೀಶರು ಹಾಗೂ ಲಕ್ಷಾಂತರ ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿದೆ. ಉತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಮೆರವಣಿಗೆಗಳು ನಡೆಯಲಿವೆ. ಈ ವೇಳೆ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲಾ ಪೊಲೀಸ್ ಅಧೀಕ್ಷಕರ ಶಿಫಾರಸಿನ ಮೇರೆಗೆ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.

ಉಡುಪಿ ನಗರಸಭೆ ವ್ಯಾಪ್ತಿ ಮಾತ್ರವಲ್ಲದೆ, ಸುಮಾರು 10 ರಿಂದ 15 ಕಿ.ಮೀ ವ್ಯಾಪ್ತಿಯ ಪಂಚಾಯತ್ ಗ್ರಾಮಗಳಾದ ಉದ್ಯಾವರ, ಕೊರಂಗ್ರಪಾಡಿ, ಅಲೆವೂರು, ಹಿರೇಬೆಟ್ಟು, ಅಂಬಲಪಾಡಿ, ಕುತ್ಪಾಡಿ, ಕಡೆಕಾರು, ಕಿದಿಯೂರು, ಮೂಡುತೋನ್ಸೆ ಮತ್ತು ಪಡುತೋನ್ಸೆ ಗ್ರಾಮಗಳಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಈ ಅವಧಿಯಲ್ಲಿ ಸನ್ನದು ಹೊಂದಿರುವ ಎಲ್ಲಾ ಬಾರ್ ಮತ್ತು ರೆಸ್ಟೋರೆಂಟ್ ಹಾಗೂ ವೈನ್ ಶಾಪ್‌ಗಳನ್ನು ಕಡ್ಡಾಯವಾಗಿ ಮುಚ್ಚುವಂತೆ ಸೂಚಿಸಲಾಗಿದ್ದು, ಆದೇಶ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಭಕ್ತಾದಿಗಳು ಮತ್ತು ಸಾರ್ವಜನಿಕರು ಶಾಂತಿಯುತವಾಗಿ ಪರ್ಯಾಯೋತ್ಸವದಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.

error: Content is protected !!