ರಾತ್ರಿ ಆಕಾಶದಲ್ಲಿ ಕಾಣುವ ಕೆಲವೊಂದು ರೋಮಾಂಚಕಾರಿ ನಿಗೂಢ ವಸ್ತುಗಳ ಬೆನ್ನು ಬಿದ್ದಿರುವ ವಿಜ್ಞಾನಿಗಳು ಹೊಸ ಸಂಶೋಧನೆಯೊಂದರ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ರಾತ್ರಿ ಆಕಾಶದಲ್ಲಿ ಕಾಣುವ ʻಚಿಕ್ಕ ಕೆಂಪು ಚುಕ್ಕೆಗಳುʼ ಎಂದು ಕರೆಯಲಾಗುವ ನಿಗೂಢ ಆಕೃತಿಗಳು ಆರಂಭದಲ್ಲಿ, ಇವುಗಳು ಸರಳ ಗೆಲಕ್ಸಿಗಳಾಗಬಹುದು ಎಂದು ಭಾವಿಸಲಾಗಿತ್ತು. ಆದರೆ ಅವುಗಳು ಬ್ರಹ್ಮಾಂಡದಲ್ಲಿ ತುಂಬಾ ಮೊದಲಿನಿಂದ ಇದ್ದ ಕಾರಣ, ಈ ವಸ್ತುಗಳಲ್ಲಿ ಇಷ್ಟು ತ್ವರಿತವಾಗಿ ಹುಟ್ಟಿದ ನಕ್ಷತ್ರಗಳಂತೆ ಕಾಣುವುದಿಲ್ಲ.

ಆದರೆ ಹೊಸ ಅಧ್ಯಯನದ ಪ್ರಕಾರ ಈ ಚುಕ್ಕೆಗಳು ಯುವ ಬೃಹತ್ ಕಪ್ಪು ಕುಳಿಗಳು ಆಗಿರಬಹುದು. ಈ ಕುಳಿಗಳು ಗಟ್ಟಿಯಾದ ಅನಿಲದ ಮೋಡಗಳಲ್ಲಿ ಮರೆಮಾಚಿಕೊಂಡ ಕಾರಣ ತಮ್ಮ ನಿಜವಾದ ಸ್ವರೂಪವನ್ನು ತೋರುವುದಿಲ್ಲ ಎಮದು ನಂಬಲಾಗಿದೆ.
ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕ (JWST) 2022 ರಲ್ಲಿ ಈ ವಸ್ತುಗಳನ್ನು ಗಮನಿಸಿದೆ. ಸಂಶೋಧಕರು “ಜೆಕಿಲ್ ಮತ್ತು ಹೈಡ್” ಎಂಬ ನಕ್ಷತ್ರಪುಂಜದಲ್ಲಿರುವ ಒಂದು ಸಣ್ಣ ಕೆಂಪು ಚುಕ್ಕೆಯನ್ನು ಹೈಲೈಟ್ ಮಾಡಿದ್ದಾರೆ, ಅದು ಮಧ್ಯಭಾಗದಲ್ಲಿ ಒಂದು ಬೃಹತ್ ಕಪ್ಪು ಕುಳಿ ಅಡಗಿರುವುದನ್ನು ತೋರಿಸುತ್ತದೆ.
ಈ ಚುಕ್ಕೆಗಳ ಸುತ್ತಲಿನ ಅನಿಲವು ಸೆಕೆಂಡಿಗೆ ಸಾವಿರಾರು ಮೈಲುಗಳಷ್ಟು ವೇಗದಲ್ಲಿ ಚಲಿಸುತ್ತದೆ. ಬ್ರೆಜಿಲ್‌ನ ಖಗೋಳ ಭೌತಶಾಸ್ತ್ರಜ್ಞ ರೊಡ್ರಿಗೋ ನೆಮ್ಮೆನ್ ಹೇಳುವಂತೆ, “ಇಂತಹ ವೇಗಗಳು, ಸಕ್ರಿಯ ಗೆಲಕ್ಸಿಯ ಮಧ್ಯಭಾಗದ ಬೃಹತ್ ಕಪ್ಪು ಕುಳಿಯ ಪರಿಣಾಮ,” ಎಂದಿದ್ದಾರೆ.
ಆದರೆ, ಸಣ್ಣ ಕೆಂಪು ಚುಕ್ಕೆಗಳು ಬೃಹತ್ ಕಪ್ಪು ಕುಳಿಗಳಂತೆ ಎಕ್ಸ್-ಕಿರಣ ಅಥವಾ ರೇಡಿಯೋ ತರಂಗಗಳನ್ನು ಹೊರಸೂಸುವುದಿಲ್ಲ. ಇದರಿಂದ, ವಿಜ್ಞಾನಿಗಳಿಗೆ ಇನ್ನೂ ಖಚಿತವಾಗಿ ಈ ಚುಕ್ಕೆಗಳು ಕಪ್ಪು ಕುಳಿಗಳೇ ಅಥವಾ ಆರಂಭಿಕ ಗೆಲಕ್ಸಿಗಳೇ ಎಂದು ಹೇಳಲು ಸಾಧ್ಯವಾಗಿಲ್ಲ. ಆದರೆ, ಅವು ಬ್ರಹ್ಮಾಂಡದ ಆರಂಭಿಕ ಹಂತದಲ್ಲಿ ಸಾಕಷ್ಟು ದ್ರವ್ಯರಾಶಿಯನ್ನು ಹೊಂದಿವೆ ಎಂಬುದು ಸ್ಪಷ್ಟ. ಈ ಚಿಕ್ಕ ಕೆಂಪು ಚುಕ್ಕೆಗಳು ಬ್ರಹ್ಮಾಂಡದ ಆರಂಭಿಕ ವಿಕಾಸದ ಹೊಸ ವಿವರಗಳನ್ನು ನಮಗೆ ನೀಡುತ್ತವೆ ಮತ್ತು ಹೊಸ ಮಹತ್ವದ ಸಂಶೋಧನೆಗಳಿಗೆ ದಾರಿ ತೆರೆದುಕೊಳ್ಳುತ್ತವೆ.