ಡಿಮಾರ್ಟ್‌ನಲ್ಲಿ ಕೆಲಸ-‌ ಕೈ ತುಂಬಾ ಸಂಬಳ- ವಾಟ್ಸ್ಯಾಪ್‌ ಜಾಹೀರಾತಿಗೆ ಬೇಸ್ತು ಬಿದ್ದ ಜನತೆ!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕುಂಪಲ–ಬೈಪಾಸ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಡಿಮಾರ್ಟ್ ಶಾಪಿಂಗ್ ಮಾಲ್‌ನಲ್ಲಿ ಉದ್ಯೋಗಾವಕಾಶಗಳಿವೆ ಎಂಬ ಸುಳ್ಳು ಜಾಹೀರಾತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರು ಇದನ್ನು ಬೇಸ್ತು ಬಿದ್ದ ಘಟನೆ ನಡೆದಿದೆ.

ಡಿಮಾರ್ಟ್‌ನಲ್ಲಿ ಅನಕ್ಷರಸ್ಥರಿಂದ ಪದವೀಧರರ ತನಕ ಉದ್ಯೋಗಾವಕಾಶಗಳಿವೆ- 25 ಸಾವಿರ ಸಂಬಳವಿದೆ ಎಂದು ಹೇಳುವ ಸಂದೇಶಗಳನ್ನು ನಂಬಿ ನೂರಾರು ಮಂದಿ ಕುಂಪಲ–ಬೈಪಾಸ್‌ನ ಡಿಮಾರ್ಟ್ ಕಟ್ಟಡದ ಬಳಿ ಧಾವಿಸಿ ಬಂದಿದ್ದಾರೆ. ಆದರೆ ಡಿಮಾರ್ಟ್ ಸಂಸ್ಥೆಯು ಈವರೆಗೆ ಉದ್ಯೋಗ ನೇಮಕಾತಿಗೆ ಸಂಬಂಧಿಸಿದ ಯಾವುದೇ ಅಧಿಕೃತ ಜಾಹೀರಾತನ್ನು ಪ್ರಕಟಿಸಿಲ್ಲ ಎಂದು ಅಲ್ಲಿನ ಭದ್ರತಾ ಸಿಬ್ಬಂದಿ ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಈ ಜಾಹೀರಾತಿನಲ್ಲಿ ಡಿಮಾರ್ಟ್ ಸಂಸ್ಥೆಗೆ ಸಂಬಂಧಿಸಿದ ಯಾವುದೇ ಅಧಿಕೃತ ದೂರವಾಣಿ ಸಂಖ್ಯೆ, ಇ-ಮೇಲ್ ವಿಳಾಸ ಅಥವಾ ವೆಬ್‌ಸೈಟ್ ವಿವರಗಳಿಲ್ಲ. ಇದಾದರೂ ಅನೇಕರು ಪರಿಶೀಲನೆ‌ ನಡೆಸದೆ ಈ ಸಂದೇಶವನ್ನು ವಾಟ್ಸ್ಯಾಪ್ ಗುಂಪುಗಳು ಹಾಗೂ ಸ್ಟೇಟಸ್‌ಗಳಲ್ಲಿ ಹಂಚಿಕೊಳ್ಳುತ್ತಿರುವುದರಿಂದ ಅನೇಕ ಮಂದಿ ಮುಗ್ಧರು ಮೋಸ ಹೋಗುವಂತಾಗಿದೆ.

ಈ ಸುಳ್ಳು ಜಾಹೀರಾತನ್ನು ನಂಬಿ ಉದ್ಯೋಗದ ನಿರೀಕ್ಷೆಯಲ್ಲಿ ಬಂದವರಿಗೆ “ಈಗ ಯಾವುದೇ ಕೆಲಸ ಖಾಲಿ ಇಲ್ಲ” ಎಂದು ಭದ್ರತಾ ಸಿಬ್ಬಂದಿ ಸಮಜಾಯಿಷಿ ನೀಡಿ ವಾಪಸ್ ಕಳುಹಿಸುತ್ತಿದ್ದಾರೆ. ನಿನ್ನೆಯಿಂದಲೇ ಸುಮಾರು ಐನೂರಕ್ಕೂ ಅಧಿಕ ಮಂದಿ ಇಲ್ಲಿ ಉದ್ಯೋಗ ಅರಸಿ ಬಂದಿರುವುದಾಗಿ ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ.

ಡಿಮಾರ್ಟ್ ಶಾಪಿಂಗ್ ಮಾಲ್ ಫೆಬ್ರವರಿ ಅಂತ್ಯದೊಳಗೆ ವಹಿವಾಟು ಆರಂಭಿಸುವ ನಿರೀಕ್ಷೆಯಿದ್ದು, ಕಟ್ಟಡ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಉದ್ಯೋಗ ಜಾಹೀರಾತುಗಳನ್ನು ನಂಬುವ ಮೊದಲು ಅವುಗಳ ಅಧಿಕೃತತೆಯನ್ನು ಪರಿಶೀಲಿಸಬೇಕು ಎಂದು ಮನವಿ ಮಾಡಲಾಗಿದೆ. ಆದರೆ ಡೀಮಾರ್ಟ್‌ ಆಡಳಿತ ಮಂಡಳಿ ಈ ಬಗ್ಗೆ ಇನ್ನೂ ಸ್ಪಷ್ಟ ಸ್ಪಷ್ಟೀಕರಣ ನೀಡಿಲ್ಲ.

error: Content is protected !!