ಮಂಗಳೂರು: ರಾಜ್ಯದ ಜನರಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ದ್ವೇಷ ಭಾಷಣ ಮಸೂದೆ ತರಲು ಉದ್ದೇಶಿಸಿದೆ ಎಂದು ಬಿಜೆಪಿ ರಾಜ್ಯ ವಕ್ತಾರೆ ಸುರಭಿ ಹೊದಿಗೆರೆ ಆರೋಪಿಸಿದ್ದಾರೆ. ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ದ್ವೇಷ ಭಾಷಣ ಮಸೂದೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಭಾರೀ ಧಕ್ಕೆ ತರುವಂತಹದ್ದು ಎಂದು ಆರೋಪಿಸಿದ ಅವರು, ಈ ಮಸೂದೆಯನ್ನು ಸೂಕ್ತ ಚಿಂತನೆ, ಸಮಾಲೋಚನೆ ಹಾಗೂ ತಜ್ಞರ ಸಲಹೆ ಇಲ್ಲದೆ, ಏಕಪಕ್ಷೀಯವಾಗಿ ರೂಪಿಸಲಾಗಿದೆ ಎಂದು ಹೇಳಿದರು.
“ಅಭಿವ್ಯಕ್ತಿ ಸ್ವಾತಂತ್ರ್ಯದಂತಹ ಅತ್ಯಂತ ಗಂಭೀರ ವಿಷಯದ ಬಗ್ಗೆ ಮಸೂದೆ ತರಬೇಕಾದರೆ ಸಾಕಷ್ಟು ಚಿಂತನೆ ನಡೆಸಬೇಕಿತ್ತು. ಯಾರೊಂದಿಗೂ ಸಮಾಲೋಚನೆ ಮಾಡಿಲ್ಲ. ದ್ವೇಷ ಭಾಷಣ ಮತ್ತು ಅಪರಾಧ ಎರಡನ್ನೂ ಒಂದೇ ಎಂದು ಪರಿಗಣಿಸಲಾಗುತ್ತಿದೆ. ಮಸೂದೆಯ ವ್ಯಾಖ್ಯಾನವೇ ಸರಿಯಾಗಿಲ್ಲ. ಇದು ಭಾವನಾತ್ಮಕವಾಗಿ ರೂಪಿಸಿದ ಮಸೂದೆ. ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸಿಲ್ಲ” ಎಂದು ಅವರು ಟೀಕಿಸಿದರು.
ಈಗಾಗಲೇ ಭಾರತೀಯ ನ್ಯಾಯ ಸಂಹಿತೆ (BNS) ಅಸ್ತಿತ್ವದಲ್ಲಿರುವಾಗ, ಹೆಚ್ಚುವರಿಯಾಗಿ ಹೊಸ ಮಸೂದೆ ತರಬೇಕಾದ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ ಅವರು, “ದ್ವೇಷ ಭಾಷಣ ಮಾಡುವ ಶಂಕೆಯ ಆಧಾರದ ಮೇಲೆ ಮುಂಚಿತವಾಗಿ ಬಂಧಿಸುವ ಉದ್ದೇಶ ಈ ಮಸೂದೆಯಲ್ಲಿ ಅಡಗಿದೆ. ಇದು ಭಾರೀ ದುರುಪಯೋಗಕ್ಕೆ ಕಾರಣವಾಗಲಿದೆ” ಎಂದು ಹೇಳಿದರು.

ಈ ಮಸೂದೆಯಿಂದ ಇಲೆಕ್ಟ್ರಾನಿಕ್ ಮಾಧ್ಯಮ, ಸಾಮಾಜಿಕ ಮಾಧ್ಯಮ ಹಾಗೂ ವಿವಿಧ ಸಂಘಟನೆಗಳು ಗುರಿಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ ಸುರಭಿ ಹೊದಿಗೆರೆ, “ಈ ಮಸೂದೆ ಸಂಸ್ಥೆಗಳನ್ನೇ ಗುರಿಯಾಗಿಸಿಕೊಂಡು ರೂಪಿಸಲಾಗಿದೆ. ಕಾಂಗ್ರೆಸ್ ನಾಯಕರ ಪದಪ್ರಯೋಗಗಳನ್ನು ರಾಜ್ಯ ಈಗಾಗಲೇ ಕಂಡಿದೆ. ಬಳ್ಳಾರಿ ಶಾಸಕ ಭರತ್ ಶೆಟ್ಟಿಯ ಪದ ಬಳಕೆ ಮಹಿಳೆಯಾಗಿ ಕೇಳಲು ಸಹ ಮುಜುಗರವಾಗುವಂತಹದ್ದು. ಆದರೆ ಸರ್ಕಾರದ ದ್ವೇಷ ಭಾಷಣ ಮಸೂದೆ ಕಾಂಗ್ರೆಸ್ ನಾಯಕರಿಗೆ ಅನ್ವಯವಾಗುವುದಿಲ್ಲ. ಇದು ಸಂಪೂರ್ಣವಾಗಿ ಬಿಜೆಪಿಯನ್ನು ಗುರಿಯಾಗಿಸಿಕೊಂಡು ತರಲಾದ ಮಸೂದೆ” ಎಂದು ಆರೋಪಿಸಿದರು.
ರಾಜ್ಯದಲ್ಲಿ ಸುಳ್ಳು ಸುದ್ದಿಗಳನ್ನು ಪತ್ತೆಹಚ್ಚುವ ಹೆಸರಿನಲ್ಲಿ ಐಟಿ ಇಲಾಖೆಯಲ್ಲಿ ಸತ್ಯ ಪರಿಶೀಲನಾ ಘಟಕವನ್ನು ಸ್ಥಾಪಿಸಿದ್ದು ಪ್ರಿಯಾಂಕ್ ಖರ್ಗೆ ಅವರ ಮುಂದಾಳತ್ವದಲ್ಲಿ ಎಂದು ಅವರು ಹೇಳಿದರು. “ಆ ಘಟಕಕ್ಕೆ ದಾಖಲಾಗಿರುವ ದೂರುಗಳಲ್ಲಿ ಸರ್ಕಾರ ಹಾಗೂ ಆಡಳಿತ ಪಕ್ಷದ ವಿರುದ್ಧ ಮಾತನಾಡಿದವರ ಮೇಲೆಯೇ ಪ್ರಕರಣಗಳನ್ನು ದಾಖಲಿಸಲಾಗಿದೆ. ಇದು ಸ್ಪಷ್ಟವಾದ ದ್ವಂದ್ವ ನೀತಿ” ಎಂದು ಆರೋಪಿಸಿದರು.
ನೀತಿನಿರ್ಣಯ ಪ್ರಕ್ರಿಯೆಯಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಟೀಕಿಸಿದ ಅವರು, “ಸುಪ್ರೀಂ ಕೋರ್ಟ್ ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಿದೆ. ಯಾವುದೇ ಮಸೂದೆ ತರಬೇಕಾದರೆ ತಡೆಗಟ್ಟುವ ಕ್ರಮಗಳು ಹಾಗೂ ನೀತಿ ಪರಿಶೀಲನೆಗಳನ್ನು ಪಾಲಿಸಬೇಕು ಎಂದು ಹೇಳಿದೆ. ಆದರೆ ಸರ್ಕಾರ ಇದನ್ನು ಲೆಕ್ಕಿಸದೇ ಏಕಪಕ್ಷೀಯವಾಗಿ ಮಸೂದೆ ತಂದಿದೆ” ಎಂದು ಹೇಳಿದರು.
ಈ ಮಸೂದೆ ಜನರಲ್ಲಿ ಭಯ ಹುಟ್ಟಿಸುವಂತದ್ದು ಎಂದು ಹೇಳಿದ ಸುರಭಿ ಹೊದಿಗೆರೆ, “ಮೊದಲ ಅಪರಾಧಕ್ಕೆ ಕನಿಷ್ಠ ಒಂದು ವರ್ಷ ಹಾಗೂ ಎರಡನೇ ಅಪರಾಧಕ್ಕೆ ಹತ್ತು ವರ್ಷಗಳವರೆಗೆ ಶಿಕ್ಷೆ ವಿಧಿಸುವ ಪ್ರಾವಧಾನ ಇರುವುದರಿಂದ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಭಾರೀ ಧಕ್ಕೆ ಉಂಟಾಗಲಿದೆ” ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರರಾದ ಅರುಣ್ ಶೆಟ್ಟಿ, ಮಾಧವ ಮೋರೆ, ಮಾಧ್ಯಮ ಸಂಚಾಲಕ ವಸಂತ್ ಪೂಜಾರಿ ಹಾಗೂ ಮಾಧ್ಯಮ ಸಹ ಸಂಚಾಲಕ ಹೇಮಂತ್ ಶೆಟ್ಟಿ ಉಪಸ್ಥಿತರಿದ್ದರು.