ಸುಮಂತ್ ನಿಗೂಢ ಸಾವು ಕೊಲೆಯೇ? ಕೆರೆಯಲ್ಲಿ ಕತ್ತಿ–ಟಾರ್ಚ್ ಪತ್ತೆ!

ಬೆಳ್ತಂಗಡಿ: ಒಡಿಲ್ನಾಳದ ಸಂಬೋಳ್ಯ ಕೆರೆಯಲ್ಲಿ ಶವವಾಗಿ ಪತ್ತೆಯಾದ ಸುಮಂತ್‌ ನಿಗೂಢ ಸಾವು ಪ್ರಕರಣ ಮತ್ತೊಂದು ಹೊಸ ತಿರುವಿನತ್ತ ಸಾಗಿದೆ. ಇದೀಗ ಕೆರೆಯನ್ನು ಸಂಪೂರ್ಣವಾಗಿ ಬತ್ತಿಸಲಾಗಿದ್ದು, ಈ ವೇಳೆ ಸುಮಂತ್‌ನ ಟಾರ್ಚ್‌ ಹಾಗೂ ಕತ್ತಿ ಪತ್ತೆಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಜ.14ರಂದು 15 ವರ್ಷದ ಸುಮಂತ್ ಶವವಾಗಿ ಪತ್ತೆಯಾದಾಗ, ಅದು ಮೊದಲು ಅಸಹಜ ಸಾವು ಎಂದು ದಾಖಲಾಗಿತ್ತು. ಶವಪರೀಕ್ಷೆಯ ಪ್ರಾಥಮಿಕ ವರದಿ ಕೂಡ “ಮುಳುಗಿ ಸಾವು” ಎಂದೇ ಹೇಳಿತು. ಆದರೆ ವರದಿಯ ಸಾಲುಗಳ ಮಧ್ಯೆ ತಲೆಯ ಮೇಲೆ  ಬಲದ ಗಾಯಗಳು ಅನುಮಾನಕ್ಕೆ ಕಾರಣವಾಗಿತ್ತು.

 

ಅದು ಅಪಘಾತವೇ? ಅಥವಾ ಯಾರಾದರೂ ಕೊಟ್ಟ ಹೊಡೆತವೇ? ಎನ್ನುವ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸರು ಪ್ರಕರಣವನ್ನು ಕೊಲೆ ಎಂದು ಮರುದಾಖಲಿಸಿ ತನಿಖೆಗೆ ಇಳಿದರು. ಡಿಎಸ್‌ಪಿ ನೇತೃತ್ವದಲ್ಲಿ ನಾಲ್ಕು ವಿಶೇಷ ತಂಡಗಳು ರಚನೆಯಾದವು. ಹುಡುಕಾಟ ಕೆರೆಯವರೆಗೂ ತಲುಪಿತು. ಇತ್ತೀಚೆಗೆ ಆ ಕೆರೆಯ ನೀರನ್ನು ಸಂಪೂರ್ಣವಾಗಿ ಖಾಲಿ ಮಾಡಿದಾಗ, ಹೊರಬಂದದ್ದು ಒಂದು ಕತ್ತಿ… ಮತ್ತೊಂದು ಟಾರ್ಚ್ ಲೈಟ್. ಈ ಟಾರ್ಚ್‌ ಸುಮಂತ್‌ ಹಿಡಿದುಕೊಂಡು ಹೋಗಿರಬಹುದೆಂದು ಶಂಕಿಸಲಾಗಿದ್ದರೂ ಕತ್ತಿ ಮಾತ್ರ ಕುತೂಹಲದ ವಸ್ತುವಾಗಿದೆ.

ಕತ್ತಿ ಸಿಕ್ಕಿದ್ದು ಹೌದಾದರೂ ಶವಪರೀಕ್ಷೆಯಲ್ಲಿ ಚೂಪಾದ ಆಯುಧದ ಗಾಯಗಳಿಲ್ಲ ಎಂದು ವರದಿ ಹೇಳುತ್ತದೆ. ಆದರೆ ತುಕ್ಕು ಹಿಡಿದಿರುವ ಕತ್ತಿ ಬೇರೆಯದೇ ಆದ ಕಥೆಯನ್ನು ಹೇಳಲಿದೆಯೇ ಎನ್ನುವ ಹೊಸ ಕುತೂಹಲ ಮೂಡಿಸಿದೆ.

ಪೊಲೀಸರು ಈಗ ಈ ಪ್ರಶ್ನೆಗಳ ಬೆನ್ನು ಹತ್ತಿದ್ದಾರೆ. ಕತ್ತಿ ಮತ್ತು ಟಾರ್ಚ್ ಅನ್ನು ಫಾರೆನ್ಸಿಕ್ ಪರೀಕ್ಷೆಗೆ ಕಳುಹಿಸುವ ಸಾಧ್ಯತೆ ಇದೆ. ಕೆರೆಯ ಸುತ್ತಲಿನ ಚಲನವಲನ, ಬಾಲಕನ ಕೊನೆಯ ಕ್ಷಣಗಳು, ಅವನ ಜೊತೆಗೆ ಇದ್ದವರು – ಎಲ್ಲವನ್ನೂ ಪೊಲೀಸರ ತಂಡಗಳು ತನಿಖೆ ಆರಂಭಿಸಿದೆ.

error: Content is protected !!