ಮಂಗಳೂರು: ಬೈಕಂಪಾಡಿ ರೈಲ್ವೇ ಬ್ರಿಡ್ಜ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿ, ಬೈಕ್ ಸವಾರನೊಬ್ಬನ ಬಲಗಾಲು ತುಂಡಾದ ಘಟನೆ ಇಂದು ಮಧ್ಯಾಹ್ನ ಸುಮಾರು 1.50ರ ಸುಮಾರಿಗೆ ನಡೆದಿದೆ.

ಪಣಂಬೂರು ಕಡೆಯಿಂದ ಬರುತ್ತಿದ್ದ ಬೈಕ್ ಸವಾರ, ಬೈಕಂಪಾಡಿ ರೈಲ್ವೇ ಬ್ರಿಡ್ಜ್ ಮೇಲಿನ ಹೆದ್ದಾರಿ ತಡೆಗೋಡೆಯ ಸಿಮೆಂಟ್ ಸ್ಲ್ಯಾಬ್‌ಗೆ ನಿಯಂತ್ರಣ ತಪ್ಪಿ ಢಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ತೀವ್ರತೆಗೆ ಸವಾರನ ಬಲಕಾಲಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಚಿಕಿತ್ಸೆ ಅಗತ್ಯವಿರುವ ಸ್ಥಿತಿ ನಿರ್ಮಾಣವಾಗಿತ್ತು.


ಅಪಘಾತದ ಬಳಿಕ ಗಾಯಾಳುವನ್ನು ಸಾರ್ವಜನಿಕರು ರಸ್ತೆ ಪಕ್ಕ ಮಲಗಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಪೊಲೀಸರಿಗೆ ಕರೆ ಮಾಡಿದರೂ ‘ಈಗ ಬರುತ್ತೇವೆ’ ಎಂಬ ಪ್ರತಿಕ್ರಿಯೆ ಹೊರತುಪಡಿಸಿ ಸ್ಥಳಕ್ಕೆ ತಕ್ಷಣ ಆಗಮಿಸದ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಯಿತು. ಇದೇ ವೇಳೆ ಹೋಗಿ ಬರುವ ವಾಹನಗಳನ್ನು ಹಾಗೂ ಆಂಬುಲೆನ್ಸ್ ನಿಲ್ಲಿಸಿ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರೂ ಅದು ಫಲಕಾರಿಯಾಗಲಿಲ್ಲ.
ಈ ಸಂಕಷ್ಟದ ಸಂದರ್ಭದಲ್ಲಿ ರಿಕ್ಷಾ ಚಾಲಕರೊಬ್ಬರು ದೇವರಂತೆ ಧಾವಿಸಿ ಬಂದು, ಗಾಯಾಳುವನ್ನು ತಮ್ಮ ರಿಕ್ಷಾದಲ್ಲಿ ಸುರತ್ಕಲ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ರಿಕ್ಷಾ ಚಾಲಕರ ಮಾನವೀಯ ನಡೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಪಘಾತಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದ್ದು, ಗಾಯಾಳುವಿನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.




