ಕರಾವಳಿ ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿಗಾಗಿ ಮಂಜುನಾಥ ಭಂಡಾರಿ ಸರ್ಕಾರಕ್ಕೆ ಮನವಿ

ಮಂಗಳೂರು: ಕರ್ನಾಟಕದ ಕರಾವಳಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಸಂಬಂಧಿಸಿ ಹಲವು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿಸಿ ವಿಧಾನ ಪರಿಷತ್‌ ಸದಸ್ಯರಾಗಿರುವ ಮಂಜುನಾಥ ಭಂಡಾರಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ರಾಜ್ಯದಲ್ಲಿ ಪ್ರವಾಸೋದ್ಯಮ ವಲಯವು ಆರ್ಥಿಕ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಹಾಗೂ ಸ್ಥಳೀಯ ಸಂಸ್ಕೃತಿಯ ಉತ್ತೇಜನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಇತ್ತೀಚೆಗೆ ಜ.10ರಂದು ನಡೆದ ಕರಾವಳಿ ಪ್ರವಾಸೋದ್ಯಮ ಮಹತ್ವದ ಮೈಲುಗಲ್ಲುಗಳ ಕುರಿತ ಕಾರ್ಯಕ್ರಮವು ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗೆ ಮಹತ್ವದ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಈ ಹಿನ್ನೆಲೆಯಲ್ಲಿ ತಮ್ಮ ಹಲವು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಮಂಜುನಾಥ ಭಂಡಾರಿ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಪ್ರಮುಖ ಬೇಡಿಕೆಗಳು:
ರಾಜ್ಯದ ಪ್ರವಾಸೋದ್ಯಮವನ್ನು ಕರಾವಳಿ ಕರ್ನಾಟಕ, ಮೈಸೂರು ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಎಂಬ ಮೂರು ವಲಯಗಳಾಗಿ ರಚಿಸಿ, ಪ್ರತಿಯೊಂದು ವಲಯಕ್ಕೂ ಐಎಎಸ್ ದರ್ಜೆಯ ಅಧಿಕಾರಿಗಳನ್ನು ನೇಮಿಸಿ, ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಅನುಷ್ಠಾನಕ್ಕಾಗಿ ವಿಶೇಷ ಪ್ಯಾಕೇಜ್ ಘೋಷಿಸಬೇಕು. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಪ್ರವಾಸೋದ್ಯಮ ಇಲಾಖೆಯಲ್ಲಿ ಖಾಯಂ ಉಪನಿರ್ದೇಶಕರ ಹುದ್ದೆಗಳನ್ನು ಹಾಗೂ ಅಗತ್ಯ ಸಿಬ್ಬಂದಿಯನ್ನು ಭರ್ತಿ ಮಾಡಬೇಕು. ಸುಬ್ರಹ್ಮಣ್ಯ-ಧರ್ಮಸ್ಥಳ-ಮೂಡುಬಿದಿರೆ ಕಾರ್ಕಳ-ಕೊಲ್ಲೂರು ನಡುವಿನ ರೈಲುಹಳಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು, ಧಾರ್ಮಿಕ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಬೇಕು.

ಕೇರಳ ಹಾಗೂ ಗೋವಾ ಮಾದರಿಯಲ್ಲಿ ರಾಜ್ಯದಲ್ಲಿಯೂ ಕರಾವಳಿ ಅಭಿವೃದ್ಧಿ ಅಧ್ಯಯನಕ್ಕಾಗಿ ತಜ್ಞರ ತಂಡವನ್ನು ರಚಿಸಿ, ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಅನುಷ್ಠಾನಕ್ಕೆ ಸಂಬಂಧಿಸಿದ ಡಿಪಿಆರ್ ಸಿದ್ಧಪಡಿಸಬೇಕು. ಪಣಂಬೂರು ಬೀಚ್ ಅನ್ನು ಎನ್‌ಎಂಪಿಎ ವ್ಯಾಪ್ತಿಗೆ ಪಡೆದು ಶಿಪ್ ಕಟ್ಟಿಂಗ್ ಯಾರ್ಡ್ ನಿರ್ಮಿಸುವ ಚಿಂತನೆಗೆ ಕೂಡಲೇ ತಡೆಯೊಡ್ಡಿ, ಎನ್ಎಎಂಪಿಎ ಸಿಎಸ್‌ಆರ್ ಅನುದಾನವನ್ನು ಪ್ರವಾಸೋದ್ಯಮ ಅಭಿವೃದ್ಧಿಗೆ ಬಳಸಬೇಕು. ಕರಾವಳಿ ಪ್ರವಾಸೋದ್ಯಮ ಸ್ಥಳಗಳ ಕುರಿತು ವಿಮಾನ ನಿಲ್ದಾಣಗಳು ಹಾಗೂ ರೈಲ್ವೇ ನಿಲ್ದಾಣಗಳಲ್ಲಿ ಸೂಕ್ತ ಸೂಚನಾ ಫಲಕಗಳನ್ನು ಅಳವಡಿಸಬೇಕು. ಮಂಗಳೂರು ರೈಲ್ವೇ ನಿಲ್ದಾಣಗಳನ್ನು ವಿಶ್ವದರ್ಜೆಗೆ ಏರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಕೈಗೊಳ್ಳಬೇಕು.

ಮಂಗಳೂರು-ಬೆಂಗಳೂರು ನಡುವೆ ವಂದೇ ಭಾರತ್ ರೈಲು ಸೇವೆ ಆರಂಭಿಸಬೇಕು. ಮಂಗಳೂರು-ಉಡುಪಿ ಮಧ್ಯೆ ಮೆಟ್ರೋ ರೈಲು ಯೋಜನೆಗೆ ಸಂಬಂಧಿಸಿದಂತೆ ಗಂಭೀರ ಚಿಂತನೆ ನಡೆಸುವುದು. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಸ್ತರಣಾ ಕಾರ್ಯದ ವೇಗವನ್ನು ತ್ವರಿತಗೊಳಿಸುವುದು. ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳಿಗೆ ಅನುಮತಿ ನೀಡಲು ಪ್ರತ್ಯೇಕ ವಿಭಾಗವನ್ನು ತೆರೆಯುವುದು. ಖಾಸಗಿಯವರಿಗೆ ಗುತ್ತಿಗೆ ನೀಡಿರುವ ಬೀಚ್‌ಗಳ ಮೇಲೆ ನಿರಂತರ ನಿಗಾವಹಿಸಿ, ಒಪ್ಪಂದ ಉಲ್ಲಂಘನೆ ನಡೆಯದಂತೆ ನೋಡಿಕೊಳ್ಳಬೇಕು.

ಮಂಗಳೂರಿನಲ್ಲಿ ರಿಂಗ್‌ ರೋಡ್ ಯೋಜನೆಗೆ ಆದ್ಯತೆ ನೀಡಿ ಶೀಘ್ರ ಅಭಿವೃದ್ಧಿಪಡಿಸುವುದು. ಈ ಮೇಲ್ಕಂಡ ಬೇಡಿಕೆಗಳನ್ನು ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಕರಾವಳಿ ಪ್ರದೇಶದ ಪ್ರವಾಸೋದ್ಯಮಕ್ಕೆ ಮಹತ್ತರ ಉತ್ತೇಜನ ನೀಡುವುದರೊಂದಿಗೆ ರಾಜ್ಯದ ಆರ್ಥಿಕ ಬೆಳವಣಿಗೆಗೆ ಸಹಕರಿಸುವಂತೆ ಮಂಜುನಾಥ ಭಂಡಾರಿ ಮನವಿಯಲ್ಲಿ ಕೋರಿದ್ದಾರೆ.

error: Content is protected !!