ಶಬರಿಮಲೆ: ತಿರುವಾಭರಣ -ಮಕರಜ್ಯೋತಿ ದರ್ಶನ-ಸಾಕ್ಷಿಯಾದ ಲಕ್ಷಾಂತರ ಭಕ್ತರು

ಶಬರಿಮಲೆ: ಮಕರ ಸಂಕ್ರಾಂತಿ ಹಾಗೂ ಮಕರವಿಳಕ್ಕು ಮಹೋತ್ಸವದ ಅಂಗವಾಗಿ ಪಂದಾಳಂ ಅರಮನೆಯಿಂದಪವಿತ್ರ ತಿರುವಾಭರಣ ಮೆರವಣಿಗೆ ಬುಧವಾರ ಸಂಜೆ ಸಬರಿಮಲೆ ಸನ್ನಿಧಾನಕ್ಕೆ ಭಕ್ತಿಭಾವದಿಂದ ಆಗಮಿಸಿದ್ದು, ಅದನ್ನು ಶ್ರೀ ಅಯ್ಯಪ್ಪ ಸ್ವಾಮಿಗೆ ಸಮರ್ಪಿಸಲಾಯಿತು. ಮೆರವಣಿಗೆಯನ್ನು ದೇವಸ್ವಂ ಸಚಿವ ವಿ.ಎನ್. ವಾಸವನ್ ಅವರು ಧ್ವಜಸ್ತಂಭದ ಬಳಿ ಭವ್ಯವಾಗಿ ಬರಮಾಡಿಕೊಂಡರು.

ಲಕ್ಷಾಂತರ ಭಕ್ತರ ‘ಸ್ವಾಮಿ ಶರಣಂ ಅಯ್ಯಪ್ಪ’ ಘೋಷಣೆಗಳ ನಡುವೆ, ಸಂಪ್ರದಾಯಬದ್ಧ ವಾದ್ಯಘೋಷಗಳು ಹಾಗೂ ಪೂಜಾ ವಿಧಿವಿಧಾನಗಳೊಂದಿಗೆ ತಿರುವಾಭರಣವನ್ನು ಸನ್ನಿಧಾನಕ್ಕೆ ತರಲಾಯಿತು. ಈ ವೇಳೆ ಟ್ರಾವನ್ಕೋರ್ ದೇವಸ್ವಂ ಬೋರ್ಡ್‌ನ ಹಿರಿಯ ಅಧಿಕಾರಿಗಳು, ತಂತ್ರಿ, ಮೇಳಶಾಂತಿ, ಪೊಲೀಸ್ ಹಾಗೂ ಆಡಳಿತಾಧಿಕಾರಿಗಳು ಉಪಸ್ಥಿತರಿದ್ದರು.

ಪಂದಾಳಂ ಅರಮನೆಯಿಂದ ಪವಿತ್ರ ಪಾದಯಾತ್ರಾ ಮಾರ್ಗಗಳನ್ನು ದಾಟಿ ಸಾಗುವ ತಿರುವಾಭರಣ ಮೆರವಣಿಗೆಗೆ ವಿಶಿಷ್ಟ ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವವಿದ್ದು, ಮಕರವಿಳಕ್ಕು ದಿನದಂದು ಶ್ರೀ ಅಯ್ಯಪ್ಪ ಸ್ವಾಮಿಗೆ ಅಲಂಕಾರ ಸಲ್ಲಿಸುವ ಉದ್ದೇಶದಿಂದ ಈ ಆಭರಣಗಳನ್ನು ತರಲಾಗುತ್ತದೆ. ಇದು ಬರುವ ಮಾರ್ಗದಲ್ಲೆಡೆ ಭಕ್ತರು ದೀಪ ಹಚ್ಚಿ, ಪೂಜೆ ಸಲ್ಲಿಸಿ ಭಕ್ತಿಯಿಂದ ಮೆರವಣಿಗೆಯಲ್ಲಿ ಪಾಲ್ಗೊಂಡರು.

ತಿರುವಾಭರಣ ಸನ್ನಿಧಾನಕ್ಕೆ ಆಗಮಿಸಿ ಪೂಜಾ ವಿಧಿವಿಧಾನಗಳು ಪೂರ್ಣಗೊಂಡ ಬಳಿಕ, ಮಕರ ಸಂಕ್ರಾಂತಿ ಸಂಜೆಯಂದು ಪೊನ್ನಂಬಲ ಬೆಟ್ಟದಲ್ಲಿ ಪವಿತ್ರ ಮಕರಜ್ಯೋತಿ ನಿಗದಿತ ಸಮಯದಲ್ಲಿ ಪ್ರಜ್ವಲಿಸಿತು. ಜ್ಯೋತಿ ಕಾಣಿಸಿಕೊಂಡ ಕ್ಷಣದಲ್ಲೇ ಸನ್ನಿಧಾನ ಹಾಗೂ ಸುತ್ತಮುತ್ತಲಿನ ಪರ್ವತ ಪ್ರದೇಶಗಳಲ್ಲಿ ‘ಸ್ವಾಮಿ ಶರಣಂ ಅಯ್ಯಪ್ಪ’ ಎಂಬ ಘೋಷಣೆಗಳು ಮೊಳಗಿದವು.

ಮಕರಜ್ಯೋತಿ ದರ್ಶನದೊಂದಿಗೆ ಮಕರವಿಳಕ್ಕು ಮಹೋತ್ಸವದ ಪರಮೋಚ್ಚ ಕ್ಷಣಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು. ಅಯ್ಯಪ್ಪ ಸ್ವಾಮಿಯ ನಾಮಸ್ಮರಣೆಯೊಂದಿಗೆ ಭಕ್ತರು ದೀಪ ಹಚ್ಚಿ, ಕೈಮುಗಿದು ಪ್ರಾರ್ಥನೆ ಸಲ್ಲಿಸಿದರು. ಮಕರಜ್ಯೋತಿ ದರ್ಶನದ ಬಳಿಕ ಶ್ರೀ ಅಯ್ಯಪ್ಪ ಸ್ವಾಮಿಗೆ ತಿರುವಾಭರಣಗಳನ್ನು ಅಲಂಕರಿಸುವ ವಿಶೇಷ ಪೂಜೆಗಳು ಸಂಪ್ರದಾಯಾನುಸಾರ ನೆರವೇರಿಸಲಾಯಿತು. ತಂತ್ರಿ ಮತ್ತು ಮೇಳ್ಶಾಂತಿ ಅವರ ನೇತೃತ್ವದಲ್ಲಿ ದೇವಸ್ವಂ ಬೋರ್ಡ್‌ನ ವಿಧಿವಿಧಾನಗಳಂತೆ ಪೂಜಾಕಾರ್ಯಗಳು ನಡೆಯಿತು.‌

error: Content is protected !!