ಟೆಹ್ರಾನ್ / ವಾಷಿಂಗ್ಟನ್: ಜೀವನ ವೆಚ್ಚ ಬಿಕ್ಕಟ್ಟು, ನಿರುದ್ಯೋಗ ಮತ್ತು ಆರ್ಥಿಕ ಕುಸಿತ, ಇಸ್ಲಾಂ ಮೂಲಭೂತವಾದದ ವಿರುದ್ಧ ಆರಂಭವಾದ ಈ ಪ್ರತಿಭಟನೆಗಳು ಶೀಘ್ರದಲ್ಲೇ ರಾಜಕೀಯ ಸ್ವರೂಪ ಪಡೆದುಕೊಂಡಿದ್ದಲ್ಲದೆ, ಆಡಳಿತ ಪತನಕ್ಕೆ ಆಗ್ರಹಿಸುವ ಘೋಷಣೆಗಳು ದೇಶಾದ್ಯಂತ ಮೊಳಗಿವೆ. ಆದರೆ ಸರ್ಕಾರ ಈ ಅಶಾಂತಿಗೆ ಅಮೆರಿಕ ಹಾಗೂ ಇಸ್ರೇಲ್ ಕಾರಣವೆಂದು ಆರೋಪಿಸಿದೆ.

ಅಮೆರಿಕ ಮೂಲದ ಮಾನವ ಹಕ್ಕುಗಳ ಸಂಘಟನೆಗಳ ಪ್ರಕಾರ, ಪ್ರತಿಭಟನೆ ಆರಂಭವಾದ ಬಳಿಕ ಇರಾನ್ ಆಡಳಿತದ ದಮನ ಕಾರ್ಯಾಚರಣೆಯಲ್ಲಿ 2,600ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ದಶಕಗಳಲ್ಲಿ ಇರಾನ್ ಕಂಡ ಅತ್ಯಂತ ರಕ್ತಪಾತದ ಪ್ರತಿಭಟನೆಗಳೆಂದು ಇದನ್ನು ವರ್ಣಿಸಲಾಗಿದೆ. ಬಂಧಿತರನ್ನು ಶೀಘ್ರದಲ್ಲೇ ಗಲ್ಲಿಗೇರಿಸುವ ಸಾಧ್ಯತೆ ಇದೆ. ಅಲ್ಲದೆ ಅಮೆರಿಕಾ ನೇರ ಮಿಲಿಟರಿ ಕಾರ್ಯಾಚರಣೆ ಇಳಿಯಲು ಸಜ್ಜಾಗಿದೆ.
ರಾಷ್ಟ್ರೀಯ ಕರೆನ್ಸಿ ರಿಯಾಲ್ ಇತಿಹಾಸದಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದ ಹಿನ್ನೆಲೆ ಆರಂಭವಾದ ಇರಾನ್‌ನ ಆರ್ಥಿಕ ವಿರೋಧಿ ಪ್ರತಿಭಟನೆಗಳು ಇದೀಗ ಸಂಪೂರ್ಣ ರಾಷ್ಟ್ರವ್ಯಾಪಿ ದಂಗೆ ಸ್ವರೂಪ ಪಡೆದುಕೊಂಡಿವೆ. ಡಿಸೆಂಬರ್ 28ರಿಂದ ಭುಗಿಲೆದ್ದ ಪ್ರತಿಭಟನೆಗಳು, ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ನೇತೃತ್ವದ ಮುಲ್ಲಾಗಳ ಆಡಳಿತದ ವಿರುದ್ಧ ನೇರ ಸವಾಲಾಗಿ ಮಾರ್ಪಟ್ಟಿದ್ದು, ಜಾಗತಿಕ ಮಟ್ಟದಲ್ಲಿ ತೀವ್ರ ಉದ್ವಿಗ್ನತೆಗೆ ಕಾರಣವಾಗಿವೆ. ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ, ಇರಾನ್ ಗುರುವಾರ ಮುಂಜಾನೆ ಯಾವುದೇ ಅಧಿಕೃತ ವಿವರಣೆ ನೀಡದೆ ವಾಣಿಜ್ಯ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಭಾಗಶಃ ಮುಚ್ಚಿತ್ತು. ಇದರಿಂದ ಅಂತರರಾಷ್ಟ್ರೀಯ ವಿಮಾನ ಸಂಚಾರಕ್ಕೆ ಭಾರಿ ವ್ಯತ್ಯಯ ಉಂಟಾಗಿದ್ದು, ಇಂಡಿಗೋ, ಏರ್ ಇಂಡಿಯಾ ಸೇರಿ ಹಲವು ವಿಮಾನಯಾನ ಸಂಸ್ಥೆಗಳು ಮಾರ್ಗ ಬದಲಾವಣೆ, ವಿಳಂಬ ಮತ್ತು ರದ್ದತಿಗೆ ಮುಂದಾಗಿದ್ದವು. ಸುಮಾರು ಐದು ಗಂಟೆಗಳ ಬಳಿಕ ವಾಯುಪ್ರದೇಶವನ್ನು ಮತ್ತೆ ತೆರೆಯಲಾಗಿದೆ.

ಇನ್ನೊಂದೆಡೆ, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯುನೈಟೆಡ್ ಸ್ಟೇಟ್ಸ್ ತನ್ನ ಕೆಲವು ಸೈನಿಕರನ್ನು ನೆಲೆಗಳಿಂದ ಹಿಂತೆಗೆದುಕೊಳ್ಳುತ್ತಿದೆ ಎಂಬ ವರದಿಗಳು ಬಂದಿವೆ. ವಾಷಿಂಗ್ಟನ್ ದಾಳಿ ನಡೆಸಿದರೆ ಅಮೆರಿಕದ ನೆಲೆಗಳ ಮೇಲೆ ದಾಳಿ ನಡೆಸುವುದಾಗಿ ಟೆಹ್ರಾನ್ ನೆರೆ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಶ್ವೇತಭವನದಲ್ಲಿ ಮಾತನಾಡಿ, ಇರಾನ್‌ನಲ್ಲಿ ಪ್ರತಿಭಟನಾಕಾರರ ಹತ್ಯೆಗಳು ನಿಂತಿದ್ದು, ಮರಣದಂಡನೆಗಳನ್ನು ಜಾರಿಗೆ ತರಲಾಗುವುದಿಲ್ಲ ಎಂಬ ಭರವಸೆ ದೊರೆತಿದೆ ಎಂದು ಹೇಳಿದರು. ಆದರೆ ಸಂಭಾವ್ಯ ಯುಎಸ್ ಮಿಲಿಟರಿ ಕ್ರಮದ ಕುರಿತು ಪ್ರಶ್ನೆ ಕೇಳಿದಾಗ, “ನಾವು ಪರಿಸ್ಥಿತಿಯನ್ನು ವೀಕ್ಷಿಸುತ್ತೇವೆ; ಮುಂದಿನ ಪ್ರಕ್ರಿಯೆ ಹೇಗಿರುತ್ತದೆ ಎಂಬುದನ್ನು ಕಾದು ನೋಡುತ್ತೇವೆ” ಎಂದು ಪ್ರತಿಕ್ರಿಯಿಸಿದ ಅವರು, ಸ್ಪಷ್ಟ ನಿಲುವು ಪ್ರಕಟಿಸಲಿಲ್ಲ.

ಇದಕ್ಕೆ ಪ್ರತಿಕ್ರಿಯಿಸಿದ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ, ಇಂದು ಅಥವಾ ನಾಳೆ ಯಾವುದೇ ಗಲ್ಲಿಗೇರಿಸುವಿಕೆ ನಡೆಯುವುದಿಲ್ಲ ಎಂದು ತಿಳಿಸಿದರೂ, ಅದಕ್ಕೆ ಸಂಬಂಧಿಸಿದ ಪುರಾವೆಗಳನ್ನು ಒದಗಿಸಲಿಲ್ಲ. ಜೊತೆಗೆ, ದೇಶದಲ್ಲಿ ಉಂಟಾಗುತ್ತಿರುವ ಹಿಂಸಾಚಾರಕ್ಕೆ ಇಸ್ರೇಲ್ ಕಾರಣವೆಂದು ಅವರು ಆರೋಪಿಸಿದರು. ಈ ನಡುವೆ, ಸಂವಹನ ಹಾಗೂ ಸ್ವತಂತ್ರ ವರದಿಗಳನ್ನು ತಡೆಯುವ ಉದ್ದೇಶದಿಂದ ಇರಾನ್ ಸರ್ಕಾರ ಇತ್ತೀಚಿನ ವರ್ಷಗಳಲ್ಲಿ ಕಂಡ ಅತ್ಯಂತ ವ್ಯಾಪಕವಾದ ಇಂಟರ್ನೆಟ್ ಸ್ಥಗಿತವನ್ನು ಜಾರಿಗೊಳಿಸಿದೆ.
ರಾಜಕೀಯ ಅಸ್ಥಿರತೆ, ಮಾನವ ಹಕ್ಕುಗಳ ಉಲ್ಲಂಘನೆ ಆರೋಪಗಳು ಮತ್ತು ಅಮೆರಿಕ–ಇರಾನ್ ನಡುವಿನ ತೀವ್ರಗೊಳ್ಳುತ್ತಿರುವ ಸಂಘರ್ಷದಿಂದಾಗಿ, ಮಧ್ಯಪ್ರಾಚ್ಯ ಮತ್ತೊಂದು ದೊಡ್ಡ ಯುದ್ಧದ ಅಂಚಿಗೆ ತಲುಪುತ್ತಿದೆಯೇ ಎಂಬ ಆತಂಕ ಅಂತರರಾಷ್ಟ್ರೀಯ ಸಮುದಾಯದಲ್ಲಿ ಹೆಚ್ಚುತ್ತಿದೆ.
