ಬೆಂಗಳೂರು: ಹಳೆ ದ್ವೇಷದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಂಗಮ್ಮನ ಪಾಳ್ಯದಲ್ಲಿ ಹವಾ ಸೃಷ್ಟಿಸಿದ್ದ ಹಳೇ ರೌಡಿ ಮೊಹಮ್ಮದ್ ಶಬ್ಬೀರ್(38)ನನ್ನು ಗ್ಯಾಂಗ್ ಒಂದು ನಡುರೋಡಿನಲ್ಲಿಯೇ ಎತ್ತಿಬಿಟ್ಟಿದೆ. ಸೋಮವಾರ ರಾತ್ರಿ 10:30 ಕ್ಕೆ ಆಟೋದಲ್ಲಿ ತನ್ನ ಸ್ನೇಹಿತರೊಂದಿಗೆ ಬರುತ್ತಿದ್ದ ಶಬ್ಬೀರ್ ಮಂಗಮ್ಮನಪಾಳ್ಯ ಮುಳ್ಯರಸ್ತೆಯ ತಿರುವಿನಲ್ಲಿ ಆರು ಮಂದಿ ದುಷ್ಕರ್ಮಿಗಳ ಭೀಕರ ದಾಳಿಗೆ ಪ್ರಾಣ ಕಳೆದುಕೊಂಡಿದ್ದಾರೆ.

ಖಾರದ ಪುಡಿ ಎರಚಿ ಲಾಂಗ್ ನಿಂದ ಹಲ್ಲೆ ನಡೆಸಿ ರೌಡಿಯನ್ನು ಭೀಕರವಾಗಿ ಮುಗಿಸಲಾಗಿದೆ. ರಿಕ್ಷಾದಲ್ಲಿದ್ದ ಶಬ್ಬೀರ್‌ನ ಸ್ನೇಹಿತರಿಗೂ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ತಕ್ಷಣದ ತನಿಖೆಯಲ್ಲಿ, ಪರಿಚಿತ ವ್ಯಕ್ತಿಗಳಿಂದ ಈ ಕೃತ್ಯ ನಡೆದ ಶಂಕೆ ವ್ಯಕ್ತವಾಗಿದೆ. ಗಾಯಗೊಂಡ ವ್ಯಕ್ತಿಗಳ ಹೇಳಿಕೆ ಆಧಾರದ ಮೇಲೆ 6 ಜನರ ವಿರುದ್ಧ ಬಂಡೆಪಾಳ್ಯ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಶಬ್ಬೀರ್ ವಿರುದ್ಧ ಕೊಲೆ ಯತ್ನ, ರಾಬರಿ ಸೇರಿದಂತೆ 15 ಪ್ರಕರಣಗಳು ದಾಖಲಾಗಿದ್ದು, ಹಳೆ ದ್ವೇಷದ ಜ್ವಾಲೆಗೆ ಶಬ್ಬೀರ್ ಕಣ್ಣು ಮುಚ್ಚುವಂತಾಗಿದೆ.
