10 ವರ್ಷದ ಅಲೈನಾಳನ್ನು ಕಚ್ಚಿಕೊಂದ ರಾಕ್ಷಸ ಬೀದಿ ನಾಯಿಗಳು!

ಬಾಗಲಕೋಟೆ: ಒಂದು ಮಗು ನಗುತ್ತಾ ಶಾಲೆಗೆ ಹೋಗಬೇಕು, ಆಟವಾಡಬೇಕು, ಕನಸು ಕಟ್ಟಬೇಕು… ಆದರೆ ಬಾಗಲಕೋಟೆಯ 10 ವರ್ಷದ ಅಲೈನಾ ಲೋಕಾಪುರಗೆ ಆ ಅವಕಾಶವೇ ಸಿಗಲಿಲ್ಲ. ಬೀದಿ ನಾಯಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಈ ಬಾಲಕಿ, ಹಲವು ದಿನಗಳ ಹೋರಾಟದ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.

ಡಿಸೆಂಬರ್ 27ರಂದು ನವನಗರದ ಸೆಕ್ಟರ್ ನಂ.15ರಲ್ಲಿ ಅಲೈನಾಳ ಮೇಲೆ ಬೀದಿ ನಾಯಿ ಏಕಾಏಕಿ ದಾಳಿ ನಡೆಸಿತ್ತು. ಬಾಲಕಿಯ ಕಣ್ಣು, ಮೂಗು, ಮುಖದ ಭಾಗವನ್ನು ನಾಶಮಾಡುವಂತೆ ಕಚ್ಚಿದ್ದ ದೃಶ್ಯವನ್ನು ಕಂಡವರು ಇನ್ನೂ ಮರೆಯಲಾರರು. ಅಂದೇ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಯಿತಾದರೂ, ಮಗಳ ಪ್ರಾಣ ಉಳಿಸಲು ಪೋಷಕರು ಮಾಡಿದ ಎಲ್ಲ ಪ್ರಯತ್ನಗಳು ವ್ಯರ್ಥವಾಗಿವೆ. ಇಂದು ಬೆಳಿಗ್ಗೆ ಅಲೈನಾ ಶಾಶ್ವತ ನಿದ್ರೆಗೆ ಜಾರಿದ್ದಾಳೆ.

ಈ ದುರಂತ ಆಡಳಿತದ ನಿರ್ಲಕ್ಷ್ಯದ ಫಲ ಎಂಬ ಆಕ್ರೋಶ ಜನರಲ್ಲಿ ಭುಗಿಲೆದ್ದಿದೆ. ಬಾಗಲಕೋಟೆಯಲ್ಲಿ ಬೀದಿ ನಾಯಿಗಳ ಹಾವಳಿ ವರ್ಷಗಳಿಂದ ಹೆಚ್ಚುತ್ತಿದ್ದರೂ, ನಗರಸಭೆ ಹಾಗೂ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.

 

error: Content is protected !!