ನಿಗೂಢ ನಾಪತ್ತೆಯಾಗಿದ್ದ ಬಾಲಕನ ಶವ ಬಾವಿಯಲ್ಲಿ ಪತ್ತೆ- ಅನುಮಾನ ಮೂಡಿಸಿದ ರಕ್ತದ ಕಲೆಗಳು

ಬೆಳ್ತಂಗಡಿ: ಪ್ರತಿವಾರದಂತೆ ದೇವಸ್ಥಾನಕ್ಕೆ ತೆರಳುವ ಅಭ್ಯಾಸವಿದ್ದ 15 ವರ್ಷದ ಸುಮಂತ್, ಇಂದು ಬೆಳಗ್ಗೆ ಸುಮಾರು 5 ಗಂಟೆಗೆ ಗೇರುಕಟ್ಟೆಯ ತನ್ನ ಮನೆಯಿಂದ ಹೊರಟವನು ನಿಗೂಢ ನಾಪತ್ತೆಯಾಗಿ ಇದೀಗ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಈ ಸಾವು ಹೇಗೆ ನಡೆಯಿತು ಎನ್ನುವುದು ಸಾಕಷ್ಟು ಕುತೂಹಲ ಮೂಡಿಸಿದ್ದು, ಮೃತದೇಹದ ಮೇಲೆ ಕಾಣಿಸಿದ ರಕ್ತದ ಕಲೆಗಳು ಇದಕ್ಕೆ ಪುಷ್ಠಿ ನೀಡಿದೆ.

 

ಎಂದಿನಂತೆ ಶಾಲೆಗೆ ಹೋಗಿದ್ದ ಸುಮಂತ್‌ ನಿಗೂಢವಾಗಿ ಕಣ್ಮರೆಯಾದನು. ದೇವಸ್ಥಾನಕ್ಕೆ ಹೋಗಿರಬಹುದೆಂಬ ಅಂದಾಜಿನಲ್ಲಿ ಅವನ ಜೊತೆ ಹೋಗುವ ಇತರ ಬಾಲಕರಲ್ಲಿ ಕೇಳಿದಾಗ “ಸುಮಂತ್ ದೇವಸ್ಥಾನಕ್ಕೆ ಬಂದಿಲ್ಲ” ಎಂದು ತಿಳಿಸಿದ್ದಾರೆ. ಇದರಿಂದ ಆತಂಕಗೊಂಡ ಮನೆಯವರು ಹಾಗೂ ಗ್ರಾಮಸ್ಥರು ಹುಡುಕಾಟ ಆರಂಭಿಸಿದರು. ಹುಡುಕಾಟದ ವೇಳೆ ಬಾಲಕ ಹೋಗುವ ದಾರಿಯಲ್ಲಿರುವ ತೋಟದ ಕೆರೆಯ ಬಳಿ ರಕ್ತದ ಕಲೆಗಳು ಕಂಡುಬಂದಿದ್ದು, ಆತಂಕ ಇನ್ನಷ್ಟು ಹೆಚ್ಚಾಗಿತ್ತು.

ಸ್ಥಳೀಯರು, ಅರಣ್ಯ ಇಲಾಖೆ, ಅಗ್ನಿಶಾಮಕ ದಳ ಹಾಗೂ ಪೊಲೀಸರು ಸೇರಿ ಶೋಧ ಕಾರ್ಯ ನಡೆಸಿದಾಗ, ಮನೆಯಿಂದ ಸುಮಾರು 500 ಮೀಟರ್ ದೂರದಲ್ಲಿರುವ ಬಾವಿಯಲ್ಲಿ ಸುಮಂತ್‌ನ ಶವ ಪತ್ತೆಯಾಯಿತು. ಮೃತದೇಹದ ಮೇಲೆ ಕೆಲವು ಗಾಯಗಳಿದ್ದು, ಅವು ಹೇಗೆ ಉಂಟಾಗಿವೆ ಎಂಬುದು ಪೋಸ್ಟ್‌ಮಾರ್ಟಂ ವರದಿ ಬಂದ ಬಳಿಕವೇ ಸ್ಪಷ್ಟವಾಗಲಿದೆ ಎಂದು ಎಸ್‌ಪಿ ಡಾ. ಅರುಣ್ ಕೆ. ತಿಳಿಸಿದ್ದಾರೆ.

Udupi SP Arun kumar

ಕುವೆಟ್ಟು ಗ್ರಾಮದ ಸಂಬೋಳ್ಯ ಬರಮೇಲು ಸುಬ್ರಹ್ಮಣ್ಯ ನಾಯಕ್ ಅವರ ಪುತ್ರನಾದ ಸುಮಂತ್, ಗೇರುಕಟ್ಟೆ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿಯಾಗಿದ್ದ. ಈ ಪ್ರದೇಶದಲ್ಲಿ ಚಿರತೆ ಓಡಾಟದ ಮಾಹಿತಿ ಇರುವುದರಿಂದ, ಅದೇನಾದರೂ ದಾಳಿ ಮಾಡಿರಬಹುದಾ ಎಂದು ಜನ ಆತಂಕಗೊಂಡಿದ್ದಾರೆ. ಆದರೆ ಬಾಲಕನ ನಿಗೂಢ ಸಾವಿನಿಂದ ಗ್ರಾಮಸ್ಥರಲ್ಲಿ ಭೀತಿ ಮತ್ತು ದುಃಖ ವಾತಾವರಣ ನಿರ್ಮಾಣವಾಗಿದೆ.

ಈ ಪ್ರಕರಣದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಾವಿನ ನಿಖರ ಕಾರಣ ತಿಳಿಯಲು ತನಿಖೆ ಮುಂದುವರಿದಿದೆ.

error: Content is protected !!