ಕಾವ್ಯಶ್ರೀ ಅಜೇರುಗೆ ಕುಂದೇಶ್ವರ ಸಮ್ಮಾನ್,  ಉಮೇಶ್ ಮಿಜಾರ್‌ಗೆ  ಕುಂದೇಶ್ವರ ಕಲಾಭೂಷಣ ಪ್ರಶಸ್ತಿ

ಮಂಗಳೂರು: ಕಾರ್ಕಳ ಹಿರ್ಗಾನ ಶ್ರೀ ಕುಂದೇಶ್ವರ ಕ್ಷೇತ್ರದ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಶ್ರೀ ಕುಂದೇಶ್ವರ ಸಮ್ಮಾನ್ ಪ್ರಶಸ್ತಿಗೆ ಯಕ್ಷಗಾನ ರಂಗದ ಅಗ್ರಮಾನ್ಯ ಮಹಿಳಾ ಭಾಗವತೆಯಾದ ಕಾವ್ಯಶ್ರೀ ಅಜೇರು ಅವರನ್ನು ಆಯ್ಕೆ ಮಾಡಲಾಗಿದೆ. ಇದೇ ವೇಳೆ ರಂಗಭೂಮಿ ಕ್ಷೇತ್ರಕ್ಕೆ ನೀಡಲಾಗುವ ಕುಂದೇಶ್ವರ ಕಲಾಭೂಷಣ ಪ್ರಶಸ್ತಿಗೆ ಹಿರಿಯ ಕಲಾವಿದ ಉಮೇಶ್ ಮಿಜಾರ್ ಆಯ್ಕೆಯಾಗಿದ್ದಾರೆ ಎಂದು ಆಯ್ಕೆ ಸಮಿತಿ ಸಂಚಾಲಕ ಜಿತೇಂದ್ರ ಕುಂದೇಶ್ವರ ತಿಳಿಸಿದ್ದಾರೆ.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಶ್ರೀ ಕುಂದೇಶ್ವರ ದೇಗುಲದ ಧರ್ಮದರ್ಶಿ, ಯಕ್ಷಗಾನ ಮೇಳ ಸಂಘಟಕ, ಕಲಾವಿದ ಹಾಗೂ ಅರ್ಥಧಾರಿಯಾಗಿದ್ದ ದಿವಂಗತ ಡಿ. ರಾಘವೇಂದ್ರ ಭಟ್ ಅವರ ಸ್ಮರಣಾರ್ಥವಾಗಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಜನವರಿ 21ರಿಂದ 23ರವರೆಗೆ ಶ್ರೀ ಕುಂದೇಶ್ವರ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೆ ನಡೆಯಲಿದ್ದು, ಜನವರಿ 23ರಂದು ಸಂಜೆ 7 ಗಂಟೆಯಿಂದ ಮಹಿಳಾ ಯಕ್ಷಗಾನ ಹಾಗೂ ತುಳು ನಾಟಕ ಕಾರ್ಯಕ್ರಮಗಳೊಂದಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದರು.

ಈ ಹಿಂದೆ ಹಲವು ಖ್ಯಾತ ಯಕ್ಷಗಾನ ಹಾಗೂ ರಂಗಭೂಮಿ ಕಲಾವಿದರಿಗೆ ಕುಂದೇಶ್ವರ ಸಮ್ಮಾನ್ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಸಮಾರಂಭದ ಬಳಿಕ ನಮ್ಮ ಬೆದ್ರ ಕಲಾವಿದರಿಂದ ‘ವೈರಲ್ ವೈಶಾಲಿ’ ತುಳು ನಾಟಕ ಪ್ರದರ್ಶನಗೊಳ್ಳಲಿದೆ.

error: Content is protected !!