ಅವರು ಮೈಕ್ ಮುಂದೆ ಬಂದಾಗ ಸಭಾಂಗಣದಲ್ಲಿ ಒಂದು ವಿಚಿತ್ರ ಮೌನ ಆವರಿಸಿತು. ಗುಂಡಿನ ಸದ್ದು, ಡ್ರೋನ್‌ಗಳ ಗರ್ಜನೆ, ಕ್ಷಿಪಣಿಗಳ ಹಾರಾಟ— ಆ 88 ಗಂಟೆಗಳ ಯುದ್ಧ ಇನ್ನೂ ಅವರ ಕಣ್ಣಲ್ಲಿ ಜೀವಂತವಾಗಿತ್ತು. ಇದು ಸಾಮಾನ್ಯ ಪತ್ರಿಕಾಗೋಷ್ಠಿ ಅಲ್ಲ. ಇದು ದೇಶದ ಗಡಿಗಳಾಚೆ ನಡೆದ ಗುಪ್ತ ಯುದ್ಧದ ಒಳಕಥೆ. ಅದನ್ನು ಹೇಳಲು ನಿಂತಿದ್ದವರು ಬೇರ್ಯಾರೂ ಅಲ್ಲ ಭಾರತೀಯ ಸೇನೆಯ ಮುಖ್ಯಸ್ಥ, ಜನರಲ್ ಉಪೇಂದ್ರ ದ್ವಿವೇದಿ. ಅವರಿಂದು 2026ರ ಮೊದಲ ಪತ್ರಿಕಾಗೋಷ್ಠಿಯಲ್ಲಿ ಆಪರೇಷನ್ ಸಿಂಧೂರ್ ಬಗ್ಗೆ ಒಂದೊಂದೇ ಕಥೆಗಳನ್ನು ಹೇಳುತ್ತಿದ್ದರೆ ಅಲ್ಲೊಂದು ಪಿನ್‌ಡ್ರಾಪ್ ಸೈಲೆಂಟ್! ತನ್ನ ಮಾತಿನ ಅಂತ್ಯದಲ್ಲಿ ಪಾಕಿಸ್ತಾನಕ್ಕೆ ಒಂದು ಖಡಕ್ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ. ಅದೇನೆಂದು ತಿಳಿಯಲು ಈ ಸುದ್ದಿಯನ್ನು ಕೊನೆಯ ತನಕವೂ ಓದಿ…!

ನಾವು ಸಿದ್ಧವಾಗಿದ್ದೆವು… 88 ಗಂಟೆಗಳೊಳಗೆ ಎಲ್ಲವನ್ನೂ ಬದಲಾಯಿಸಿಬಿಟ್ಟೆವು. ಕಳೆದ ಏಪ್ರಿಲ್ 22ರಂದು ಅಮಾಯಕರು ಕೊಲ್ಲಲ್ಪಟ್ಟಿದ್ದರು. ಅದು ಕೇವಲ ದಾಳಿ ಆಗಿರಲಿಲ್ಲ. ಅದು ಭಾರತಕ್ಕೆ ಒಡ್ಡಿದ ನೇರ ಸವಾಲಾಗಿತ್ತು. ಅದಕ್ಕಾಗಿ ಪ್ರತೀಕಾರ ತೀರಿಸಲೇಬೇಕಿತ್ತು. ಆ ದಿನವೇ ನಾನು ನನ್ನ ಅಧಿಕಾರಿಗಳಿಗೆ ಹೇಳಿದೆ, ‘ಈ ಬಾರಿ ಉತ್ತರ ವಿಭಿನ್ನವಾಗಿರಬೇಕು ಅಂತ!
ನಾವು ಗಡಿಯಾಚೆಗಿನ ನಕ್ಷೆಗಳನ್ನು ತೆರೆದಾಗ, ಅದು ಕೇವಲ ಪಾಕಿಸ್ತಾನ ಎನ್ನುವ ಒಂದು ಪ್ರಜಾಪ್ರಭುತ್ವ ರಾಷ್ಟ್ರವಾಗಿರಲಿಲ್ಲ. ಅಲ್ಲಿದುದು ಭಯೋತ್ಪಾದನೆಯ ಸಂಪೂರ್ಣ ಜಾಲ. ಶಿಬಿರಗಳು, ತರಬೇತಿ ಕೇಂದ್ರಗಳು, ಲಾಂಚ್ ಪ್ಯಾಡ್‌ಗಳು ಎಲ್ಲವೂ ನಮ್ಮ ಕಣ್ಣ ಮುಂದೆ ದಾಳಿಗೆ ಸಜ್ಜಾಗಿ ನಿಂತಿದ್ದರೆ, ನಾವು ಅದಕ್ಕೆ ಎದೆಗೊಡ್ಡಿ ಸವಾಲು ಸ್ವೀಕರಿಸಿದೆವು.

ಮೇ 7ರ ಬೆಳಗ್ಗೆ… ಆಪರೇಷನ್ ಸಿಂಧೂರ್ ಆರಂಭವಾಯಿತು. ಕೇವಲ 22 ನಿಮಿಷಗಳಲ್ಲಿ ನಾವು ಮೊದಲ ಗುರಿಯನ್ನು ಹೊಡೆದಿದ್ದೆವು. ನಮಗದು ನಿಜವಾಗಿಯೂ ಸತ್ವ ಪರೀಕ್ಷೆ. ಆದರೆ ಆ ನಂತರದ ಬರೇ 88 ಗಂಟೆಗಳಲ್ಲಿ ಮುಗಿಸಿಬಿಟ್ಟೆ. ನಾನು ಸೇನೆಯನ್ನು ಸಂಪೂರ್ಣವಾಗಿ ಸಜ್ಜುಗೊಳಿಸಿದ್ದೆ. ಪಾಕಿಸ್ತಾನ ಯಾವುದೇ ತಪ್ಪು ಮಾಡಿದರೂ ಸಿದ್ಧವಾಗಿದ್ದೆವು. ಭೂ ದಾಳಿಗೂ ನಮ್ಮ ಸೇನೆ ಸಿದ್ಧವಾಗಿತ್ತು.
ನಾವು ಕೇವಲ ಅವರನ್ನು ಹೊಡೆದಿಲ್ಲ. ನಾವು ಅವರ ಯುದ್ಧತಂತ್ರವನ್ನೇ ಬದಲಾಯಿಸಿದ್ದೇವೆ. ಮೊದಲಿಗೆ ಭಯೋತ್ಪಾದಕರ ಮೂಲಸೌಕರ್ಯವನ್ನು ನಾಶ ಮಾಡಿದೆವು.
ಅವರ ‘ನ್ಯೂಕ್ಲಿಯರ್ ಬೆದರಿಕೆ’ ಎಂಬ ಮನಃಸ್ಥಿತಿಯನ್ನೇ ಪಂಕ್ಚರ್ ಮಾಡಿದೆವು. ಅವರು ಕ್ಷಿಪಣಿ, ಡ್ರೋನ್‌ಗಳನ್ನು ಹಾರಿಸಿದರು. ನಾವು ಅವನ್ನೆಲ್ಲಾ ಆಕಾಶದಲ್ಲೇ ನಾಶ ಮಾಡಿದೆವು. ನಂತರ ನಾವು ಅವರ ವಾಯುನೆಲೆಗಳ ಮೇಲೆ ಹೊಡೆದೆವು. 88 ಗಂಟೆಗಳಲ್ಲಿ ನಮ್ಮ ನಿಗದಿತ ಗುರಿಯನ್ನು ಮುಗಿಸಿಬಿಟ್ಟೆವು.

ಮೇ 10ರಂದು ಕದನ ವಿರಾಮವಾಯಿತು. ಆದರೆ ನಾನು ಹೇಳುತ್ತೇನೆ – ಯುದ್ಧದ ಮನಸ್ಥಿತಿ ಇನ್ನೂ ಮುಗಿದಿಲ್ಲ. ಇಂದು ಕಾಶ್ಮೀರ ನಿಯಂತ್ರಣದಲ್ಲಿ ಇದೆ. 2025ರಲ್ಲಿ ಹಲವಾರು ಉಗ್ರರನ್ನು ನಾವು ಕೊಂದಿದ್ದೇವೆ. ಪಹಲ್ಗಾಮ್ ದಾಳಿಯ ಮೂವರು ಅಪರಾಧಿಗಳೂ ನೆಲಕ್ಕುರುಳಿಸಿದ್ದೇವೆ. ಸ್ಥಳೀಯ ಉಗ್ರರು ಈಗ ಒಂದಂಕೆಯಲ್ಲಿದ್ದಾರೆ. ಈ ಹಿಂದೆ ಹಲವಾರು ಮಂದಿ ಉಗ್ರಜಾಲಕ್ಕೆ ಸಿಲುಕುತ್ತಿದ್ದರೆ ಈ ಬಾರಿ ಇಬ್ಬರ ನೇಮಕಾತಿ ನಡೆದಿದೆ. ಇದು ಬದಲಾವಣೆಯ ಸಂಕೇತ.
ಇಂದು ಕಾಶ್ಮೀರದಲ್ಲಿ ಗನ್ ಸದ್ದಿಗಿಂತ ಪ್ರವಾಸಿಗರ ಹೆಜ್ಜೆ ಸದ್ದುಗಳೇ ಜಾಸ್ತಿಯಾಗಿ ಕೇಳುತ್ತಿದೆ. ನಾಲ್ಕು ಲಕ್ಷಕ್ಕೂ ಹೆಚ್ಚು ಜನ ಅಮರನಾಥ ಯಾತ್ರೆಗೆ ಬಂದಿದ್ದಾರೆ. ಆದರೆ ನಾನು ಸ್ಪಷ್ಟವಾಗಿ ಹೇಳುತ್ತೇನೆ, ಇಸ್ಲಾಮಾಬಾದ್ ಯಾವುದೇ ದುಸ್ಸಾಹಸ ಮಾಡಿದರೆ… ಈ ಬಾರಿ ನಮ್ಮ ಪ್ರತಿಕ್ರಿಯೆ ಇನ್ನೂ ಭಯಂಕರವಾಗಿರುತ್ತದೆ. ನಾವು ಯಾವ ಕ್ಷಣದಲ್ಲೂ ಯುದ್ಧಕ್ಕೆ ಸಿದ್ಧವಾಗಿದ್ದೇವೆ.”
ಇಷ್ಟು ಹೇಳಿ ಜನರಲ್ ಉಪೇಂದ್ರ ದ್ವಿವೇದಿ ಮಾತು ಮುಗಿಸಿದರು. ಆದರೆ ಬಾಯಲ್ಲಿ ಉದುರಿಬಂದ ʻಈ ಯುದ್ಧ ಮುಗಿದಿಲ್ಲ.ʼ ಎನ್ನುವ ವಾಕ್ಯ ಇಡೀ ದೇಶವಾಸಿಗಳ ಕಿವಿಯಲ್ಲಿನ ಗುಂಯ್ಗುಡುತ್ತಿದೆ.