ನಕಲಿ ಪ್ರೊಫೈಲ್‌ ಸೃಷ್ಟಿಸಿ ವಿಡಿಯೋ ಕಾಲ್‌ ಮಾಡಿ ಯುವಕನ ಬೆತ್ತಲೆಗೊಳಿಸಿ ಬ್ಲ್ಯಾಕ್ ಮೇಲ್; 1.5 ಲಕ್ಷ ರೂ. ಸುಲಿಗೆ

ಬೆಂಗಳೂರು: ಡೇಟಿಂಗ್‌ ಆ್ಯಪ್‌ನಲ್ಲಿ ನಕಲಿ ಪ್ರೊಫೈಲ್‌ ಸೃಷ್ಟಿಸಿದ ಕಿಡಿಗೇಡಿ, ಯುವಕನೊಬ್ಬನನ್ನು ವಿಡಿಯೋ ಕಾಲ್‌ ಮಾಡಿ ಬೆತ್ತಲೆಗೊಳಿಸಿ ಬ್ಲ್ಯಾಕ್ ಮೇಲ್ ಮಾಡಿ ಒಂದೂವರೆ ಲಕ್ಷ ರೂ. ಸುಲಿಗೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಈಜಿಪುರದಲ್ಲಿ ವಾಸವಾಗಿರುವ ಯುವಕ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದಾನೆ. ಜ.5ರಂದು ಡೇಟಿಂಗ್‌ ಆ್ಯಪ್ನಲ್ಲಿ ಪ್ರೊಫೈಲ್‌ ರಚಿಸಿದ ತಕ್ಷಣ ಇಶಾನಿ ಎಂಬ ಯುವತಿಯಿಂದ ರಿಕ್ವೆಸ್ಟ್‌ ಬಂದಿದೆ. ಬಳಿಕ ಪರಿಚಯ ಮಾಡಿಕೊಂಡು ಇಬ್ಬರು ಕೂಡ ಏಕಾಂತವಾಗಿ ಮಾತನಾಡಲು ಶುರು ಮಾಡಿದ್ದರು. ಖಾಸಗಿ ವಿಚಾರವನ್ನು ಹಂಚಿಕೊಂಡಿದ್ದರು. ನಂತರ ಇಬ್ಬರು ಮೊಬೈಲ್‌ ನಂಬರ್‌ ಶೇರ್‌ ಮಾಡಿಕೊಂಡು ಮಾತನಾಡಿದ್ದಾರೆ.

ಕೆಲ ದಿನಗಳ ಹಿಂದೆ ಯುವಕನಿಗೆ ಯುವತಿಯಿಂದ ವಿಡಿಯೋ ಕಾಲ್‌ ಬಂದಿದೆ. ಬಟ್ಟೆಯನ್ನು ಬೆಚ್ಚಿ, ಆತನ ಮುಂದೆ ಬೆತ್ತಲೆಯಾಗಿದ್ದಾಳೆ. ನೀನು ಬಟ್ಟೆ ಬಿಚ್ಚು ಎಂದು ಹೇಳಿ, ಅವನನ್ನು ಬೆತ್ತಲೆ ಮಾಡಿದ್ದಾಳೆ. ಆತ ಕೂಡ ಬಟ್ಟೆಯನ್ನು ಬಿಚ್ಚಿದ್ದಾನೆ. ಈ ದೃಶ್ಯಗಳನ್ನು ಸೆರೆ ಹಿಡಿದುಕೊಂಡಿದ್ದ ಕಿಡಿಗೇಡಿ ಯುವತಿ, ಖಾಸಗಿ ಚಿತ್ರಗಳನ್ನು ವಾಟ್ಸ್‌ಆ್ಯಪ್ ಮಾಡಿದ್ದಾಳೆ. ಅಲ್ಲದೆ, ಈ ವಿಡಿಯೋವನ್ನು ನಿನ್ನ ಸ್ನೇಹಿತರು, ಕುಟುಂಬಕ್ಕೆ ಕಳುಹಿಸಿವೆ. ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಳ್ಳುವೆ ಎಂದು ಹೇಳಿದ್ದಾಳೆ.

ಅದರಿಂದ ಭಯಗೊಂಡ ಯುವಕ ಮೊದಲು 60 ಸಾವಿರ ರೂ. ಹಾಗೂ ನಂತರ 93 ಸಾವಿರ ರೂ. ಕಳುಹಿಸಿದ್ದಾನೆ. ಆದರೂ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಾಗ ಕೂಡಲೇ ಸೆನ್‌ ಠಾಣೆಗೆ ಬಂದು ದೂರು ನೀಡಿದ್ದಾನೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ವಿಭಾಗದ ಸೆನ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಸೆನ್‌ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಎಐ ಮೂಲಕ ಯುವತಿಯ ಪ್ರೊಫೈಲ್‌ ಸೃಷ್ಟಿಸಿದ್ದು, ಎಐ ಯುವತಿಯೇ ಬೆತ್ತಲೆಯಾಗಿದ್ದಾಳೆ ಎಂಬುದು ಗೊತ್ತಾಗಿದೆ ಎಂದು ಸೆನ್‌ ಠಾಣೆ ಪೊಲೀಸರು ಮಾಹಿತಿ ನೀಡಿದರು.

error: Content is protected !!