ಬಾಂಗ್ಲಾದೇಶದ ಟಿ20 ವಿಶ್ವಕಪ್‌ ಸಮಸ್ಯೆಗೆ ಪರಿಹಾರ ಸೂಚಿಸಿದ ಐಸಿಸಿ

ಮುಂಬೈ: ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ದ ನಡೆಯುವ ಹಲ್ಲೆಗಳನ್ನು ವಿರೋಧಿಸಿ ಬಾಂಗ್ಲಾ ಬೌಲರ್‌ ಮುಸ್ತಫಿಜುರ್‌ ರೆಹಮಾನ್‌ ಅವರನ್ನು ಐಪಿಎಲ್‌ ನಲ್ಲಿ ಭಾಗವಹಿಸದಂತೆ ಬಿಸಿಸಿಐ ಮಾಡಿದೆ. ಇದರಿಂದ ಕೆರಳಿರುವ ಬಾಂಗ್ಲಾದೇಶವು ಫೆಬ್ರವರಿಯಲ್ಲಿ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಗೆ ತನ್ನ ತಂಡವನ್ನು ಕಳುಹಿಸುವುದಿಲ್ಲ, ತನ್ನ ಪಂದ್ಯಗಳನ್ನು ಶ್ರೀಲಂಕಾದಲ್ಲಿ ನಡೆಸಬೇಕು ಎಂದು ಐಸಿಸಿಗೆ ಮನವಿ ಮಾಡಿದೆ.

ವಿಶ್ವಕಪ್‌ ಕೂಟಕ್ಕೆ ಇನ್ನು ಕೆಲವೇ ದಿನಗಳು ಇರುವ ಕಾರಣದಿಂದ ಲಾಜೆಸ್ಟಿಕ್‌ ಸೇರಿ ಹಲವು ಸಮಸ್ಯೆಗಳಿಂದ ಇದು ಕಷ್ಟ ಎನ್ನಲಾಗಿದೆ. ಬಾಂಗ್ಲಾದೇಶದ ಪಂದ್ಯಗಳಿಗೆ ಪರ್ಯಾಯ ಸ್ಥಳಗಳನ್ನು ಐಸಿಸಿ ಪರಿಗಣಿಸುತ್ತಿದೆ ಎಂದು ವರದಿಗಳು ಸೂಚಿಸಿವೆ, ಆದರೆ ಬಾಂಗ್ಲಾದೇಶ ಕೇಳಿಕೊಂಡಂತೆ ಅದು ಶ್ರೀಲಂಕಾದಲ್ಲಿ ಆಡುವ ಸಾಧ್ಯತೆ ಕಡಿಮೆ ಎಂದು ತೋರುತ್ತದೆ. ಕೋಲ್ಕತಾ ಮತ್ತು ಮುಂಬೈ ಬದಲಿಗೆ ಚೆನ್ನೈ ಮತ್ತು ತಿರುವನಂತಪುರಂನಲ್ಲಿ ಬಾಂಗ್ಲಾ ಪಂದ್ಯಗಳು ನಡೆಯಬಹುದು ಎನ್ನಲಾಗಿದೆ.

ಇದರ ನಡುವೆ ಬಾಂಗ್ಲಾದೇಶದ ಟಿ20 ವಿಶ್ವಕಪ್ ಪಂದ್ಯಗಳ ಸ್ಥಳ ಬದಲಾವಣೆಯ ಕುರಿತು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಯಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿದ್ದಾರೆ.

ಪ್ರಸ್ತುತ ವೇಳಾಪಟ್ಟಿಯ ಪ್ರಕಾರ, ಬಾಂಗ್ಲಾದೇಶ ತಂಡವು ಫೆಬ್ರವರಿ 17 ರಂದು ನೇಪಾಳವನ್ನು ಎದುರಿಸಲು ಮುಂಬೈಗೆ ತೆರಳುವ ಮೊದಲು ಕೋಲ್ಕತ್ತಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ (ಫೆಬ್ರವರಿ 7), ಇಟಲಿ ವಿರುದ್ಧ (ಫೆಬ್ರವರಿ 9) ಮತ್ತು ಇಂಗ್ಲೆಂಡ್ ವಿರುದ್ಧ (ಫೆಬ್ರವರಿ 14) ಮೂರು ಪಂದ್ಯಗಳನ್ನು ಆಡಲಿದೆ.

error: Content is protected !!