ಸರ್ಕಾರವನ್ನು ಟೀಕಿಸುವವರನ್ನೆಲ್ಲಾ ‘ರಾಷ್ಟ್ರ ವಿರೋಧಿ’ ಎಂದು ಮುದ್ರೆ ಹೊಡೆಯುವ ಪ್ರವೃತ್ತಿ ಸರಿಯಲ್ಲ : ಪ್ರಧಾನಿ ವಿರುದ್ಧ ಖರ್ಗೆ ವಾಗ್ದಾಳಿ

ಬೆಂಗಳೂರು: ಪ್ರಾಚೀನ ಇತಿಹಾಸದ ವಿಚಾರಗಳನ್ನು ಕೆದಕುವ ಮೂಲಕ ಪ್ರಧಾನಿ ಮೋದಿ ಅವರು ಅಭಿವೃದ್ಧಿಯ ಕುರಿತು ಜನರ ಗಮನ ಬೇರೆಡೆಗೆ ಸೆಳೆಯರು ಯತ್ನಿಸುತ್ತಿದ್ದಾರೆಂದು ಸಚಿವ ಪ್ರಿಯಾಂಕ್ ಖರ್ಗೆ ಶನಿವಾರ(ಜ.10) ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಗುಜರಾತ್‌ನ ಸೋಮನಾಥ ಸ್ವಾಭಿಮಾನ ಪರ್ವ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಸೋಮನಾಥ ದೇವಸ್ಥಾನದ ಪುನರ್ ನಿರ್ಮಾಣದ ಇತಿಹಾಸವನ್ನು ಉಲ್ಲೇಖಿಸಿ ಮಾತನಾಡಿದ್ದರು.

ಮೋದಿಯವರ ಈ ಭಾಷಣ ಸರ್ಕಾರದ 11 ವರ್ಷದ ಕಾರ್ಯಕ್ಷಮತೆಯಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಯತ್ನವಾಗಿದೆ ಎಂದು ಮೋದಿ ಹೇಳಿಕೆಯ ವಿರುದ್ಧ ಪ್ರಿಯಾಂಕ್ ಖರ್ಗೆಯವರು ಟೀಕಿಸಿದ್ದಾರೆ.

“ಪ್ರಧಾನಿಯಿಂದ ನಮಗೆ ಬೇಕಿರುವುದು ಏನು? ಇತಿಹಾಸ ಪಾಠಗಳೇ? ದೇಶದ ಭವಿಷ್ಯದ ಬ್ಲೂಪ್ರಿಂಟ್ ಎಲ್ಲಿದೆ? 11 ವರ್ಷಗಳಿಂದ ಘೋಷಣೆಗಳೇ ಹೊರತು ಫಲಿತಾಂಶವೇ ಇಲ್ಲ. ‘ಮೇಕ್ ಇನ್ ಇಂಡಿಯಾ’, ‘ಸ್ಕಿಲ್ ಇಂಡಿಯಾ’, ‘ಡಿಜಿಟಲ್ ಇಂಡಿಯಾ’ ಎಲ್ಲವೂ ವಿಫಲವಾಗಿದೆ ಎಂದು ಆರೋಪಿಸಿದರು. “ಜನರಿಗೆ ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ. ಸರ್ಕಾರವನ್ನು ಟೀಕಿಸುವವರನ್ನೆಲ್ಲಾ ‘ರಾಷ್ಟ್ರ ವಿರೋಧಿ’ ಎಂದು ಮುದ್ರೆ ಹೊಡೆಯುವ ಪ್ರವೃತ್ತಿ ಸರಿಯಲ್ಲ ಎಂದು ಕಿಡಿಕಾರಿದರು.

ಕೇಂದ್ರದಿಂದ ಸಮರ್ಪಕ ನೆರವು ಇಲ್ಲದೆ ರಾಜ್ಯವೇ ಉದ್ಯೋಗ ಸೃಷ್ಟಿ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಮಾಡುತ್ತಿದೆ ಎಂದು ಅವರು ಹೇಳಿದರು.

error: Content is protected !!