ಮಂಗಳೂರು: ಕೇರಳ ವಿಧಾನಸಭೆಯಲ್ಲಿ ಅಂಗೀಕೃತಗೊಂಡಿರುವ ‘ಮಲಯಾಳಂ ಕಡ್ಡಾಯ ಭಾಷಾ ಮಸೂದೆ–2025’**ಯನ್ನು ಮರುಪರಿಶೀಲನೆ ನಡೆಸುವುದಾಗಿ ಕೇರಳ ರಾಜ್ಯಪಾಲರು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕೆ ಭರವಸೆ ನೀಡಿದ್ದಾರೆ ಎಂದು ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅವರು ತಿಳಿಸಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರದ ಅಧೀನದಲ್ಲಿರುವ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ರಾಜ್ಯದ ಹೊರಗಿರುವ ಕನ್ನಡ ಭಾಷಾ ಅಲ್ಪಸಂಖ್ಯಾತರ ಹಿತ ರಕ್ಷಣೆಗೆ ಕಾರ್ಯನಿರ್ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಬಹುಸಂಖ್ಯಾತರಾಗಿರುವ ಕನ್ನಡ ಭಾಷಿಕರ ಹಿತಾಸಕ್ತಿಗೆ ಧಕ್ಕೆಯಾಗುವಂತೆ ಮಲಯಾಳಂ ಕಡ್ಡಾಯ ಭಾಷಾ ಮಸೂದೆ ಜಾರಿಗೊಳ್ಳುತ್ತಿರುವುದನ್ನು ವಿರೋಧಿಸಿ ಕ್ರಮ ಕೈಗೊಳ್ಳಲಾಗಿದೆ ಎಂದರು.
2017ರಲ್ಲಿ ಇದೇ ರೀತಿಯ ಭಾಷಾ ಮಸೂದೆಯನ್ನು ರಾಷ್ಟ್ರಪತಿಗಳು ತಿರಸ್ಕರಿಸಿದ್ದರು. ಈಗ ಕೇರಳ ಸರ್ಕಾರ ಮರುಪ್ರಸ್ತಾಪಿಸಿರುವ ಮಸೂದೆ ಸಂಪೂರ್ಣ ಅಸಂವಿಧಾನಿಕವಾಗಿದ್ದು, ಕಾಸರಗೋಡು ಜಿಲ್ಲೆಯಲ್ಲಿ ಶೇಕಡಾ 90ರಷ್ಟು ಕನ್ನಡ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದರು. ಭಾರತ ಸಂವಿಧಾನದ 350(ಬಿ), 347, 30, 350ಎ ಹಾಗೂ 350 ವಿಧಿಗಳು ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ಸ್ಪಷ್ಟವಾಗಿ ರಕ್ಷಿಸುತ್ತವೆ. ಆದರೂ ಈ ಮಸೂದೆ ಜಾರಿಯಾದರೆ, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಮಲಯಾಳಂ ಭಾಷೆಯನ್ನು ಕಡ್ಡಾಯವಾಗಿ ಕಲಿಯಬೇಕಾದ ಪರಿಸ್ಥಿತಿ ಉಂಟಾಗಿ ಅವರ ಶೈಕ್ಷಣಿಕ ಮತ್ತು ಭವಿಷ್ಯ ಜೀವನಕ್ಕೆ ಭಾರಿ ಹಾನಿಯಾಗಲಿದೆ ಎಂದು ಎಚ್ಚರಿಸಿದರು.

ಈ ಹಿನ್ನೆಲೆಯಲ್ಲಿ ಕಾಸರಗೋಡು ಹಾಗೂ ಕೇರಳದ ಇತರ ಕನ್ನಡ ಭಾಷಿಕ ಪ್ರದೇಶಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಶಿಕ್ಷಕರ ನೇಮಕ ಕಡ್ಡಾಯಗೊಳಿಸುವುದು, ಪೊಲೀಸ್ ಠಾಣೆ, ರೈಲು ನಿಲ್ದಾಣ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕನ್ನಡ ಸೂಚನಾ ಫಲಕ ಸ್ಥಾಪನೆ, ಸರ್ಕಾರಿ ಕಚೇರಿ ವ್ಯವಹಾರ ಸ್ಥಳೀಯ ಕನ್ನಡ ಭಾಷೆಯಲ್ಲಿ ನಡೆಸುವುದು, ಉದ್ಯೋಗ ನೇಮಕಾತಿಯಲ್ಲಿ ಸ್ಥಳೀಯ ಭಾಷಾ ಅಲ್ಪಸಂಖ್ಯಾತರಿಗೆ ಆದ್ಯತೆ, ಭಾಷಾ ಅಲ್ಪಸಂಖ್ಯಾತರ ಸಮಸ್ಯೆಗಳ ಕುರಿತು ಎರಡು ತಿಂಗಳಿಗೊಮ್ಮೆ ಸಭೆ ನಡೆಸುವಂತೆ ಜಿಲ್ಲಾಧಿಕಾರಿ ಸಮಿತಿಗೆ ಸೂಚನೆ, ಈ ಎಲ್ಲಾ ಬೇಡಿಕೆಗಳನ್ನು ಜಾರಿಗೊಳಿಸುವಂತೆ ಕೇಂದ್ರ ಗೃಹ ಸಚಿವಾಲಯದ ಭಾಷಾ ಅಲ್ಪಸಂಖ್ಯಾತ ವಿಭಾಗ ಈಗಾಗಲೇ ಕೇರಳ ಸರ್ಕಾರಕ್ಕೆ ಸೂಚನೆ ನೀಡಿದೆ ಎಂದು ತಿಳಿಸಿದರು.
ಕರ್ನಾಟಕ ಮುಖ್ಯಮಂತ್ರಿಗಳು ಈಗಾಗಲೇ ಕೇರಳ ಮುಖ್ಯಮಂತ್ರಿ ಅವರಿಗೆ ಈ ಮಸೂದೆಯನ್ನು ವಾಪಸ್ ಪಡೆಯುವಂತೆ ಜನವರಿ 8ರಂದು ಆಗ್ರಹಿಸಿದ್ದಾರೆ. ಈ ಹಿನ್ನೆಲೆ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ಕಾಸರಗೋಡು ಕನ್ನಡಿಗರ ನಿಯೋಗವು ಜನವರಿ 10ರಂದು ಮಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ, ಕೇರಳ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮನವಿ ಸಲ್ಲಿಸಲಿದೆ ಎಂದು ಸೋಮಣ್ಣ ಬೇವಿನಮರದ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ್ ಮಾತನಾಡಿ, ಸಂವಿಧಾನದಲ್ಲಿ ಕೇರಳದ ಕಾಸರಗೋಡಿಗೆ ಭಾಷಾ ವಿಚಾರದಲ್ಲಿ ಸಂವಿಧಾನದಲ್ಲಿ ವಿಶೇಷ ಮಾನ್ಯತೆ ಇದೆ. ಹಾಗಾಗಿ ಕಾಸರಗೋಡು, ಮಂಜೇಶ್ವರ ಕನ್ನಡಿಗರಿಗೆ ಭಾಷಾ ಬಳಕೆಗೆ ಒತ್ತು ನೀಡಲಾಗಿದೆ. ಕನ್ನಡದಲ್ಲಿ ನಾಮಫಲಕ ಹಾಕುವುದು ಸಂವಿಧಾನ ನೀಡಿದ ವಿಶೇಷ ಹಕ್ಕು. ಕರ್ನಾಟಕದ ಎಲ್ಲ ಭಾಷಾ ಅಕಾಡೆಮಗಳಲ್ಲಿ ಕಾಸರಗೋಡಿನವರಿಗೆ ಸ್ಥಾನಮಾನ ಇದೆ. ಕನ್ನಡಿಗರ ಭಾಷಾ ಹಕ್ಕು ಉಳಿಸಲು ಹೋರಾಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎ ಆರ್ ಸುಬ್ಬಯಕಟ್ಟೆ, ಸದಸ್ಯರು, ಸುಕೇಶ ಎ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷರು, ಟಿ ಶಂಕರ ನಾರಾಯಣ ಭಟ್, ಪ್ರದೀಪ ಕುಮಾರ ಕಲ್ಕೂರ
ನ್ಯಾಯವಾದಿ ಮುರಳಿಧರ ಬಲ್ಲೂಕುರಾಯ, ಎಸ್ ಜೆ ಸೋಮಶೇಖರ, ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯರು, ಝಡ್ ಎ ಕಯ್ಯಾರ್ ಉಪಸ್ಥಿತರಿದ್ದರು.