ಬ್ರಹ್ಮಾವರ ಕೃಷಿ ಕಾಲೇಜು ಮೇಲ್ದರ್ಜೆಗೇರಿಸಲು ಕ್ರಮ: ಮಂಜುನಾಥ ಭಂಡಾರಿ ಮನವಿಗೆ ಸಚಿವ ಎನ್.ಚೆಲುವರಾಯ ಸ್ವಾಮಿ ಸ್ಪಂದನೆ

ಮಂಗಳೂರು: ಬ್ರಹ್ಮಾವರ ಸರ್ಕಾರಿ ಡಿಪ್ಲೋಮ ಕೃಷಿ ಕಾಲೇಜನ್ನು ಮೇಲ್ದರ್ಜೆಗೇರಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಕೃಷಿ ಸಚಿವ ಎನ್. ಚೆಲುವರಾಯ ಸ್ವಾಮಿ ಅವರು ಭರವಸೆ ನೀಡಿದ್ದು,  ಈ ಮೂಲಕ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರ ಮನವಿಗೆ ಸ್ಪಂದನೆ ನೀಡಿದ್ದಾರೆ.

ಅವರು ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಗದ್ದೆಯಲ್ಲಿ ಕರ್ನಾಟಕ ಪ್ರದೇಶ ಕೃಷಿಕ ಸಮಾಜ, ಬೆಂಗಳೂರು ಹಾಗೂ ಜಿಲ್ಲಾ ಕೃಷಿಕ ಸಮಾಜದ ಸಹಯೋಗದಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಕೃಷಿಮೇಳದಲ್ಲಿ ಪಾಲ್ಗೊಂಡು ಮಾತನಾಡಿ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ಈ ಹಿಂದೆಯೇ ಬ್ರಹ್ಮಾವರ ಸರ್ಕಾರಿ ಕೃಷಿ ಕಾಲೇಜಿನ ಮೂಲಸೌಕರ್ಯ ಹಾಗೂ ಶೈಕ್ಷಣಿಕ ಪರಿಸ್ಥಿತಿಗಳ ಬಗ್ಗೆ ಸಚಿವಎನ್. ಚೆಲುವರಾಯ ಸ್ವಾಮಿ ಅವರಿಗೆ ಮನವಿ ಸಲ್ಲಿಸಿದ್ದರು. ಇದೇ ವಿಚಾರವನ್ನು ಕೃಷಿಮೇಳದ ಸಂದರ್ಭದಲ್ಲೂ ಸಚಿವರ ಗಮನಕ್ಕೆ ತರಲಾಗಿದ್ದು, ಸಮಸ್ಯೆಗಳ ಕುರಿತು ಸ್ಪಂದಿಸಿದ ಸಚಿವರು ತಕ್ಷಣವೇ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ಬ್ರಹ್ಮಾವರ ಡಿಪ್ಲೋಮ ಕೃಷಿ ಕಾಲೇಜನ್ನು ಮೇಲ್ದರ್ಜೆಗೇರಿಸುವ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಕೃಷಿ ಶಿಕ್ಷಣ ಹಾಗೂ ಸಂಶೋಧನಾ ಅವಕಾಶಗಳು ದೊರೆಯಲಿವೆ ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದರು.

error: Content is protected !!