ಭೀಕರ ಅಪಘಾತ: ಬೋಳಿಯಾರ್ ಯುವಕನ ಬದುಕು ರತ್ನಗಿರಿಯಲ್ಲಿ ಅಂತ್ಯ

ಮಂಗಳೂರು: ಮಹಾರಾಷ್ಟ್ರದ ರತ್ನಗಿರಿಯಲ್ಲಿ ಮಂಗಳವಾರ ನಡೆದ ಲಾರಿಗಳ ನಡುವಿನ ಭೀಕರ ಅಪಘಾತದಲ್ಲಿ ಮಂಗಳೂರು ಸಮೀಪದ ಬೋಳಿಯಾರ್ ನಿವಾಸಿ, ಯುವ ಲಾರಿ ಚಾಲಕ ಮುಹಮ್ಮದ್ ರಿಝ್ವಾನ್ (28) ಅವರು ಮೃತಪಟ್ಟಿದ್ದಾರೆ.

ಬೋಳಿಯಾರ್‌ನ ಬಿ.ಎಚ್. ಕರೀಂ ಎಂಬವರ ಪುತ್ರ ರಿಝ್ವಾನ್, ಕಳೆದ ಹಲವು ವರ್ಷಗಳಿಂದ ಮೀನಿನ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಮಂಗಳವಾರ ಮಹಾರಾಷ್ಟ್ರದ ರತ್ನಗಿರಿಯ ರಸ್ತೆಯಲ್ಲಿ ಲಾರಿ ಚಲಾಯಿಸುತ್ತಿದ್ದಾಗ ಸಾವು ಅಟ್ಟಿಸಿಕೊಂಡು ಬಂದಿತ್ತು. ಎರಡು ಬೃಹತ್ ಲಾರಿಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ರಿಝ್ವಾನ್ ಗಂಭೀರವಾಗಿ ಗಾಯಗೊಂಡು, ಕೊನೆಯುಸಿರೆಳೆದಿದ್ದಾರೆ.

ರಿಝ್ವಾನ್ ಅವರ ಸಾವಿನಿಂದ ಒಂದು ಇಡೀ ಕುಟುಂಬದ ಆಧಾರಸ್ತಂಭ ಕುಸಿದಂತಾಗಿದೆ. ಮನೆಯಲ್ಲಿ ಕಾಯುತ್ತಿರುವ ತಂದೆ-ತಾಯಿ, ಆಕ್ರಂದನ ಮಾಡುತ್ತಿರುವ ಪತ್ನಿ ಮತ್ತು ಎರಡು ವರ್ಷದ ಹಸುಗೂಸು ಹಾಗೂ ಮೂವರು ಸಹೋದರರು ಮತ್ತು ಮೂವರು ಸಹೋದರಿಯರ ದೊಡ್ಡ ಸಂಸಾರ ಈಗ ದುಃಖದ ಮಡುವಿನಲ್ಲಿದೆ. ಬೋಳಿಯಾರ್ ಕೇಂದ್ರ ಮಸೀದಿಯ ವಠಾರದಲ್ಲಿ ರಿಝ್ವಾನ್ ದಫನ ಕಾರ್ಯ ನಡೆಯಲಿದೆ.

error: Content is protected !!