ಪೊಲೀಸ್ ಎಂದರೆ ನಮಗೆ ಯಾವಾಗಲೂ ಗಟ್ಟಿತನ. ಕಣ್ಣು ಕೆಂಪಾಗಿರುತ್ತದೆ, ಶಬ್ದ ಗಂಭೀರವಾಗಿರುತ್ತದೆ, ಕೈಯಲ್ಲಿ ಲಾಠಿ ಇರುತ್ತದೆ ಎಂದೆಲ್ಲಾ ಯೋಚನೆ ಬರುತ್ತದೆ. ಆದರೆ ಆ ಯೂನಿಫಾರ್ಮ್ ಒಳಗೆ ಒಂದು ಮನಸ್ಸು ಇರುತ್ತದೆ ಎಂಬುದನ್ನು ನಾವು ಎಷ್ಟು ಬಾರಿ ಮರೆತುಬಿಡುತ್ತೇವೆ? ಶಿವಮೊಗ್ಗದ ಪಶ್ಚಿಮ ಸಂಚಾರ ಠಾಣೆಯ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಮುಹಮ್ಮದ್ ಝಕ್ರಿಯಾ(55) ಠಾಣೆಯಲ್ಲಿಯೇ ತನ್ನದೇ ಉಸಿರನ್ನು ನಿಲ್ಲಿಸಿಕೊಂಡಿದ್ದಾರೆ.

ಅಪರಾಧ ಮಾಡುವ ಖದೀಮರನ್ನು ಬೆಂಡೆತ್ತಿ, ತನ್ನ ಡ್ಯೂಟಿಯನ್ನು ನಿಯತ್ತಾಗಿ ಮಾಡುತ್ತಿದ್ದ ಝಕ್ರಿಯಾ ಕೊನೆಗೆ ತಮ್ಮನ್ನೇ ತಾವು ಕೊಂದುಕೊಂಡರು.
“ನಾನು ಯಾರಿಗೂ ಹೇಳಿಕೊಳ್ಳಲಿಲ್ಲ…”
ಅವರ ಡೆತ್ ನೋಟ್ ಓದಿದರೆ, ಅದು ಕಾಗದವಲ್ಲ; ಅದು ಕರಗಿದ ಮನಸ್ಸಿನ ಚೀರಾಟದಂತೆ ಕೇಳಿಸುತ್ತದೆ. “ನಾನು 26 ವರ್ಷ ನಿಷ್ಠೆಯಿಂದ ಸೇವೆ ಮಾಡಿದ್ದೇನೆ” ಎಂಬ ಮೊದಲ ಸಾಲಿನಲ್ಲಿಯೇ ಇದು ಸೋತ ಮನಸ್ಸಿನ ಅಂತಿಮ ನಿರ್ಧಾರ ಹೇಳುತ್ತದೆ. ಕಳೆದ ಒಂದು ವರ್ಷದಿಂದ ಮಾನಸಿಕ ಕಿರುಕುಳ,
ಜಗಳ, ಅಪಪ್ರಚಾರ, ಬೇರೆ ಜಿಲ್ಲೆಗಳಲ್ಲೂ ಆದ ಅವಮಾನದಿಂದ ಈ ನಿರ್ಧಾರ ತೆಗೆದುಕೊಂಡರು ಎನ್ನುವುದು ಡೆತ್‌ನೋಟಲ್ಲಿ ಅರಿವಾಗುತ್ತಿದೆ.

“ನನ್ನ ಹಿರಿಯ ಅಧಿಕಾರಿಗಳಿಗೆ… ನನ್ನ ಪ್ರೀತಿಯ ಗೆಳೆಯನಿಗೆ… ನನ್ನ ತಮ್ಮ ಆದಿಲ್‌ಗೆ… ಮತ್ತು ನನ್ನ ಠಾಣೆಯ ಸಹೋದ್ಯೋಗಿಗಳಿಗೆ…” ಡೆತ್ ನೋಟ್‌ನ ಮೊದಲ ಸಾಲೇ ಹೇಳುತ್ತದೆ, ಇದು ಕೋಪದ ಪತ್ರವಲ್ಲ. ಇದು ದಣಿದ ಮನಸ್ಸಿನ ವಿದಾಯ. “26 ವರ್ಷ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದೇನೆ” ಎಂದು ಬರೆದುಬಿಟ್ಟವನಿಗೆ, ಆ ನಿಷ್ಠೆಯೇ ಕೊನೆಗೆ ಭಾರವಾಗಿ ಕುಳಿತಿತ್ತು. ಪ್ರತಿ ದಿನದ ಡ್ಯೂಟಿಗಿಂತ ಭಾರವಾದುದು ಮಾನಸಿಕ ಕಿರುಕುಳ, ಜಗಳ, ಸಾರ್ವಜನಿಕ ಅವಮಾನ, ಅಪಪ್ರಚಾರ.

“ನನ್ನ ಹಿರಿಯ ಅಧಿಕಾರಿಗಳು ಹಾಗೂ ನನ್ನ ಪ್ರೀತಿಯ ಗೆಳೆಯ ಹಾಗೂ ತಮ್ಮ ಆದಿಲ್ ಹಾಗೂ ನಮ್ಮ ಠಾಣೆಯ ಸಹೋದ್ಯೋಗಿಗಳೆ ನಮಸ್ಕಾರಗಳು ನಾನು ಇಲಾಖೆಯಲ್ಲಿ 26 ವರ್ಷ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದೇನೆ. ಕಳೆದ ಒಂದು ವರ್ಷದಿಂದ ನಮ್ಮ ಠಾಣೆಯ ನಾಸೀರ್ ಅಹಮದ್ (ಹೆಚ್‌ಸಿ 131) ಅವರು ನನಗೆ ಮಾನಸಿಕ ಕಿರುಕುಳ ನೀಡುತ್ತಿದ್ದು, ಜಗಳ ಮಾಡಿ ನನ್ನ ಬಗ್ಗೆ ಸಾರ್ವಜನಿಕವಾಗಿ ಅಪಪ್ರಚಾರ ಮಾಡಿದ್ದಾರೆ. ಉಡುಪಿ ಪಿಎಂ ಬಂದೋಬಸ್ತ್‌ಗೆ ಹೋದ ಸಂದರ್ಭದಲ್ಲೂ ಬೇರೆ ಜಿಲ್ಲೆಗಳ ಸಿಬ್ಬಂದಿಗಳ ಬಳಿ ನನ್ನ ವಿರುದ್ಧ ಅಪಪ್ರಚಾರ ಮಾಡಿದ್ದಾರೆ. ಇದರಿಂದ ನನಗೆ ಮಾನಸಿಕವಾಗಿ ತೀವ್ರ ನೋವಾಗಿದೆ ಹಾಗೂ ಆರೋಗ್ಯ ಸಮಸ್ಯೆಯೂ ಉಂಟಾಗಿದೆ. ನಾನು ನಮ್ಮ ಠಾಣೆಯ ವಿಚಾರವನ್ನು ನಮ್ಮ ಮನೆಯಲ್ಲಿ ಯಾರತ್ರ ಹೇಳಿಕೊಳ್ಳುವುದಿಲ್ಲ, ಆದರೆ ಜಗಳ ಮಾಡಿದ ಬಗ್ಗೆ ಆದಿಲ್ ರವರ ಹತ್ತಿರ ಹೇಳಿಕೊಂಡಿರುತ್ತೇನೆ ಹಾಗೂ ನನ್ನ ಬಗ್ಗೆ,ನನ್ನ ಕರ್ತವ್ಯದ ಬಗ್ಗೆ ರಾಧಾ ಮೇಡಂ ಹಾಗೂ ಕವಿತಾ ಮೇಡಂ ಹತ್ತಿರ ಅವನಿಗೆ ಯಾಕೆ ಅಲ್ಲಿ ಹಾಕಿದಿರಿ ಇಲ್ಲಿ ಹಾಕಿದ್ದೀರಿ ಅಂತ ಕೇಳುತ್ತಾನೆ ಹಾಗೂ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾನೆ. ಆದರಿಂದ ನಾನು ನೊಂದು ಆತ್ಮಹತ್ಯೆ ಮಾಡಿಕೊಂಡಿರುತ್ತೇನೆ. ನನ್ನ ಸಾವಿಗೆ ನಾಸೀರ್ ಅಹ್ಮದ್ ಹೆಚ್ ಸಿ 131 ಕಾರಣ”
-ಹೀಗೆಂದು ಝಕ್ರಿಯಾ ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಇದು ಆತುರದ ನಿರ್ಧಾರ ಅಲ್ಲ. ಇದು ದೀರ್ಘ ಕಾಲದ ಮೌನದ ಅಂತ್ಯ. ಒಬ್ಬ ಪೊಲೀಸ್, ತನ್ನ ಯೂನಿಫಾರ್ಮ್ ಬಿಚ್ಚಿಟ್ಟು, ನೇರವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದರೆ ಅವನ ಮನಸ್ಸಿನ ತಲ್ಲಣ ಅದೆಷ್ಟಿರಬಹುದು? ಒಬ್ಬ ಪೊಲೀಸ್… ಲಾಠಿ ಹಿಡಿದ ಕೈಗಳು ಕಂಪಿಸುತ್ತಿದ್ದರೂ, ಮನಸ್ಸು ಮುರಿದರೂ, ಡ್ಯೂಟಿಗೆ ಹಾಜರಾಗಲೇಬೇಕು ಅನ್ನುವುದಾದರೆ ಅವರಿಗೆ ತನ್ನ ಉದ್ಯೋಗ ತೃಪ್ತಿ ಕೊಟ್ಟಿಲ್ಲ, ಬದಲಿಗೆ ಜೀವಮಾನವಿಡೀ ಕೊಟ್ಟಿದ್ದು ನೋವನ್ನೇ.
ಈ ಸಾವಿಗೆ ತನಿಖೆ ನಡೆಯುತ್ತದೆ. ಕೇಸ್ ದಾಖಲಾಗುತ್ತದೆ. ಫೈಲ್‌ಗಳು ಮುಂದೆ ಸಾಗುತ್ತವೆ ಅಷ್ಟೆ. ಯೂನಿಫಾರ್ಮ್ ಹಾಕಿಕೊಂಡವನು ಅತ್ತರೆ, ಅವನ ಕಣ್ಣೀರಿಗೆ ಕಾರಣ ಯಾರು? ನಿಜ ಮುಹಮ್ಮದ್ ಝಕ್ರಿಯಾ ಸತ್ತಿಲ್ಲ. ಅವರು ನಮಗೆ ಒಂದು ಪ್ರಶ್ನೆ ಬಿಟ್ಟು ಹೋಗಿದ್ದಾರೆ. ನಾವು ಅದಕ್ಕೆ ಉತ್ತರ ಕೊಡಬೇಕಿದೆ.