
ಹೈದರಾಬಾದ್: ಕಾರೊಂದು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ತೆಲಂಗಾಣದ ಚೆವೆಲ್ಲಾ ಸಮೀಪದ ಮಿರ್ಜಾಗುಡದ ಮೊಕಿಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು(ಜ.08) ಮುಂಜಾನೆ 1:30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.

ಮೃತಪಟ್ಟವರು 18 ರಿಂದ 21 ವರ್ಷದೊಳಗಿನ ಬಿಬಿಎ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ.
ಗೆಳೆಯನ ಹುಟ್ಟುಹಬ್ಬದ ಪಾರ್ಟಿ ಮುಗಿಸಿ ವಾಪಸ್ ಆಗುತ್ತಿದ್ದಾಗ ಈ ಅವಘಡ ಸಂಭವಿಸಿದ್ದು, ಕಾರು ಅತೀ ವೇಗದಲ್ಲಿದ್ದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಕಾರಿನಲ್ಲಿದ್ದ ಐವರ ಪೈಕಿ ನಾಲ್ವರು ಮೃತಪಟ್ಟಿದ್ದು, ಓರ್ವ ವಿದ್ಯಾರ್ಥಿನಿ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನಾಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.