ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕಳೆದ 5 ವರ್ಷಗಳಲ್ಲಿ 517 ಮಂದಿ ಏಡ್ಸ್ ನಿಂದಾಗಿ ಸಾವನ್ನಪ್ಪುತ್ತಿದ್ದಾರೆ. 2021-22ರಲ್ಲಿ 90, 2022-2023ರಲ್ಲಿ 94, 2023-2024ರಲ್ಲಿ 145, 2024-2025ರಲ್ಲಿ 113, 2025-2026ರಲ್ಲಿ 75 ಮಂದಿ ಸಾವನ್ನಪ್ಪಿದ್ದಾರೆ. ದ.ಕ. ಜಿಲ್ಲೆಯಲ್ಲಿ ಕಳೆದ 5 ವರ್ಷಗಳಲ್ಲಿ 131 ಮಂದಿ ಸಾವನ್ನಪ್ಪಿದ್ದಾರೆ. 2021-2022ರಲ್ಲಿ 36, 2022-2023ರಲ್ಲಿ 37, 2023-2024ರಲ್ಲಿ 28, 2024-2025ರಲ್ಲಿ 16, 2025-2026ರಲ್ಲಿ 14 ಮಂದಿ ಸಾವನ್ನಪ್ಪಿದ್ದಾರೆ.

ಎಚ್‌ಐವಿ ಸೋಂಕಿತರ ಚಿಕಿತ್ಸೆಗಾಗಿ ಉಡುಪಿ, ಕುಂದಾಪುರ, ಕೆಎಂಸಿ ಮಣಿಪಾಲ, ವೆನ್ಲಾಕ್ ಆಸ್ಪತ್ರೆ, ಎಲ್ಲ ಮೆಡಿಕಲ್ ಕಾಲೇಜುಗಳಲ್ಲಿ ಎಆರ್‌ಟಿ ಕೇಂದ್ರಗಳಿವೆ. ಎಚ್‌ಐವಿ ಸೋಂಕಿತರಿಗೆ ಸರಕಾರದ ಮೂಲಕ ಹಲವಾರು ರೀತಿಯ ಸವಲತ್ತುಗಳನ್ನು ನೀಡಲಾಗುತ್ತಿದೆ. ಮುಖ್ಯವಾಗಿ ಅಂತ್ಯೋದಯ ಯೋಜನೆ, ಬಿಪಿಎಲ್ ಪಡಿತರ ಚೀಟಿ, ವಿಶೇಷ ಪಾಲನ ಯೋಜನೆ, ರಾಜೀವ್ ಗಾಂಧಿ ವಸತಿ ಯೋಜನೆ ಇವುಗಳಲ್ಲಿ ಸೇರಿವೆ.

ಅಸುರಕ್ಷಿತ ಲೈಂಗಿಕ ಸಂಪರ್ಕ, ಸೋಂಕು ಇರುವ ವ್ಯಕ್ತಿಯಿಂದ ರಕ್ತ ಪಡೆಯುವುದು, ಸೋಂಕು ಇರುವ ವ್ಯಕ್ತಿ ಉಪಯೋಗಿಸಿದ ಸಿರಿಂಜ್, ಸೂಜಿ ಹಾಗೂ ಇತರ ಉಪಕರಣಗಳನ್ನು ಸಂಸ್ಕರಿಸದೆ ಬಳಕೆ ಮಾಡುವುದು, ಸೋಂಕು ಇರುವ ತಾಯಿಯಿಂದ ಜನಿಸುವ ಮಗು ಇತ್ಯಾದಿ ಕಾರಣಗಳಿಂದಾಗಿ ಏಡ್ಸ್ ಹಾಗೂ ಸೋಂಕಿತರ ಸಂಖ್ಯೆ ಹೆಚ್ಚಳಕ್ಕೆ ಕಾರಣ ಎಂಬುವುದು ಅಧಿಕಾರಿಗಳ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಮಾತ್ರ ಏಡ್ಸ್ ರೋಗಿಗಳಿಗೆ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸಲು ಶೇ.50 ರಿಯಾಯಿತಿ ದರದಲ್ಲಿ ಪಾಸ್‌ಗಳನ್ನು ವಿತರಿಸಲಾಗುತ್ತಿದೆ. 600 ಕ್ಕೂ ಅಧಿಕ ಮಂದಿ ಇದರ ಪ್ರಯೋಜನ ಪಡೆಯುತ್ತಿದ್ದು, ರೋಟರಿ, ಲಯನ್ಸ್, ರೆಡ್ ಕ್ರಾಸ್ ಸಂಸ್ಥೆಗಳ ನೆರನಿಂದ ಏಡ್ಸ್ ಪೀಡಿತರಾಗಿರುವ ಮಕ್ಕಳಿಗೆ ಪ್ರೋಟೀನ್ ಪೌಡರ್‌ಮತ್ತು ವಿಟಮಿನ್ ಯುಕ್ತ ಮಾತ್ರೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ.
ಎಚ್‌ಐವಿ ಏಡ್ಸ್ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮುಖ್ಯವಾಗಿ ವಲಸೆ ಕಾರ್ಮಿಕರು ಇರುವ ಪ್ರದೇಶಗಳನ್ನು ಗುರುತಿಸಿ ಆ ಭಾಗದಲ್ಲಿ ಹೆಚ್ಚು ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.