ಬೆಂಗಳೂರು: ಶನಿವಾರ ರಾತ್ರಿ ಸುಬ್ರಹಣ್ಯ ಲೇಔಟ್‌ನ ಅಪಾರ್ಟ್‌ಮೆಂಟ್ ಒಂದರಲ್ಲಿ ಉಂಟಾದ ಬೆಂಕಿ ಅವಘಡ, ಮಂಗಳೂರಿನ ಕಾವೂರು ಮೂಲದ ಯುವತಿ ಶರ್ಮಿಳಾ (34) ಅವರ ಬದುಕಿನ ದೀಪವನ್ನೇ ನಂದಿಸಿದೆ. ಕನಸುಗಳ ನಗರ ಬೆಂಗಳೂರಿನಲ್ಲಿ, ಬದುಕು ಕಟ್ಟಿಕೊಳ್ಳುವ ಆಸೆಯೊಂದಿಗೆ ಬಂದಿದ್ದ ಶರ್ಮಿಳಾ, ದಟ್ಟ ಹೊಗೆಯಲ್ಲಿ ಉಸಿರುಗಟ್ಟಿ ಒಂಟಿಯಾಗಿ ಪ್ರಾಣ ಬಿಟ್ಟಿದ್ದಾರೆ.

ಒಂದೂವರೆ ವರ್ಷಗಳಿಂದ ಸ್ನೇಹಿತೆಯ ಜೊತೆ ವಾಸವಾಗಿದ್ದ ಶರ್ಮಿಳಾ, ಸಮೀಪದ ಸಾಫ್ಟ್‌ವೇರ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ರಜೆಗಾಗಿ ಸ್ನೇಹಿತೆ ಊರಿಗೆ ತೆರಳಿದ್ದರಿಂದ, ಆ ರಾತ್ರಿ ಮನೆಯಲ್ಲಿ ಶರ್ಮಿಳಾ ಒಬ್ಬರೇ ಇದ್ದರು. ಹೊರಗೆ ಜಗತ್ತು ನಿಶ್ಶಬ್ದವಾಗಿ ನಿದ್ರಿಸುತ್ತಿದ್ದ ಕ್ಷಣದಲ್ಲಿ, ಮನೆಯೊಳಗೆ ಒಂದು ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಮನೆ ತುಂಬ ದಟ್ಟ ಹೊಗೆ ಆವರಿಸಿದೆ.

ಪಕ್ಕದ ಕೋಣೆಯಲ್ಲಿದ್ದ ಶರ್ಮಿಳಾ ಆತಂಕದಿಂದ ಬೆಂಕಿ ಕಾಣಿಸಿಕೊಂಡ ಕೋಣೆಯತ್ತ ಹೆಜ್ಜೆ ಇಟ್ಟ ಕ್ಷಣದಲ್ಲೇ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕಿಟಕಿ, ಬಾಗಿಲು… ಯಾವುದನ್ನೂ ತೆರೆಯಲು ಸಾಧ್ಯವಾಗದ ಪರಿಸ್ಥಿತಿ. ಸಹಾಯಕ್ಕಾಗಿ ಕೂಗುವ ಅವಕಾಶವೂ ಸಿಗದಂತೆ, ಹೊಗೆ ಉಸಿರನ್ನೇ ಕಸಿದುಕೊಂಡಿದೆ. ಕೊನೆಗೆ, ಆಕೆಯ ಬದುಕಿನ ಹೋರಾಟ ಅಲ್ಲಿಯೇ ಮುಕ್ತಾಯಗೊಂಡಿದೆ.

ಮರಣೋತ್ತರ ಪರೀಕ್ಷೆ ಬಳಿಕ ಶರ್ಮಿಳಾಳ ದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ದೂರದ ಊರಿನಲ್ಲಿ ಇದ್ದ ಅಮ್ಮ-ಅಪ್ಪ, ಮನೆಯವರ ಪಾಲಿಗೆ ಈ ಸುದ್ದಿ ಮಿಂಚಿನಂತೆ ಬಡಿದಿದೆ. ಕನಸುಗಳ ಹೊರೆ ಹೊತ್ತು ನಗರಕ್ಕೆ ಬಂದ ಮಗಳ ಮರಳುವಿಕೆ, ಶವವಾಗಿ ನಡೆಯುತ್ತದೆಂದು ಯಾರೂ ಊಹಿಸಿರಲಿಲ್ಲ.

ಈ ದುರ್ಘಟನೆ ಕೇವಲ ಒಂದು ಅಪಘಾತವಲ್ಲ, ಮಹಾನಗರದ ಅಪಾರ್ಟ್‌ಮೆಂಟ್‌ಗಳಲ್ಲಿ ಸುರಕ್ಷತೆ ಎಷ್ಟು ಅವಶ್ಯಕ ಎಂಬುದನ್ನು ನೆನಪಿಸುವ ಕಹಿ ಎಚ್ಚರಿಕೆ ಇಲ್ಲಿದೆ. ಆದರೆ, ಅದಕ್ಕಿಂತಲೂ ಹೆಚ್ಚು… ಒಂಟಿತನದಲ್ಲಿ ಸಿಲುಕಿದ ಒಂದು ಜೀವದ ಮೌನದ ನೋವು, ಇನ್ನೂ ನಮ್ಮನ್ನು ಕಾಡುತ್ತಲೇ ಇರುತ್ತದೆ.